ನವದೆಹಲಿ:- ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯನ್ನು ಹೊಗಳಿದ್ದಕ್ಕೆ ಕಾಂಗ್ರೆಸ್ ನಾಯಕರು ಶಶಿ ತರೂರ್ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಇಂದು ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಶಶಿ ತರೂರ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದರು. ಅದರ ಬೆನ್ನಲ್ಲೇ ಶಶಿ ತರೂರ್ ಕೂಡ ಸಾಮಾಜಿಕ ಜಾಲತಾಣದಲ್ಲಿ ಮಾರ್ಮಿಕ ಪೋಸ್ಟ್ ಮಾಡಿದ್ದಾರೆ. “ಹಾರಲು ಅನುಮತಿ ಕೇಳಬೇಡಿ. ರೆಕ್ಕೆಗಳು ನಿಮ್ಮವು ಮತ್ತು ಆಕಾಶ ಯಾರಿಗೂ ಸೇರಿದ್ದಲ್ಲ” ಎಂದು ಅವರು ಪೋಸ್ಟ್ ಮಾಡಿದ್ದಾರೆ. ಈ ಮೂಲಕ ಖರ್ಗೆಗೆ ಪರೋಕ್ಷವಾಗಿಯೇ ತಿರುಗೇಟು ನೀಡಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಹೇಳಿದ್ದೇನು?
ನಮಗೆ ದೇಶ ಮೊದಲು. ಆದರೆ, ಕೆಲವರಿಗೆ ಮೋದಿಯೇ ಮೊದಲು” ಎಂದು ಶಶಿ ತರೂರ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದರು. ಹಾಗೇ, “ಶಶಿ ತರೂರ್ ಇಂಗ್ಲಿಷ್‌ನಲ್ಲಿ ನಿರರ್ಗಳವಾಗಿ ಮಾತನಾಡುತ್ತಾರೆ. ನನಗೆ ಇಂಗ್ಲಿಷ್ ಚೆನ್ನಾಗಿ ಓದಲು ಬರುವುದಿಲ್ಲ. ಅವರ ಭಾಷೆ ತುಂಬಾ ಚೆನ್ನಾಗಿದೆ. ಅದಕ್ಕಾಗಿಯೇ ನಾವು ಅವರನ್ನು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸದಸ್ಯರನ್ನಾಗಿ ಮಾಡಿದ್ದೇವೆ” ಎಂದು ಮಲ್ಲಿಕಾರ್ಜುನ ಖರ್ಗೆ ಇಂದು ಹೇಳಿದ್ದರು.
ಇನ್ನೂ ಪ್ರಧಾನಿ ಮೋದಿಯವರ ಬಗ್ಗೆ ಹೊಗಳಿ ಬರೆದಿದ್ದ ಶಶಿ ತರೂರ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರಲಿದ್ದಾರೆ ಎಂಬ ವದಂತಿಗಳೂ ಹರಿದಾಡಿದ್ದವು. ಆದರೆ, ನಿನ್ನೆಯೇ ಅದಕ್ಕೆ ಸ್ಪಷ್ಟನೆ ನೀಡಿದ್ದ ತರೂರ್, ನಾನು ನನ್ನ ಸಿದ್ಧಾಂತವನ್ನು ಬದಲಿಸುವುದಿಲ್ಲ. ನನ್ನ ಹೇಳಿಕ ಪ್ರಧಾನಿ ಮೋದಿಯವರ ಪಕ್ಷವನ್ನು ಸೇರುವ ಉದ್ದೇಶದಿಂದ ಬರೆದಿದ್ದಲ್ಲ. ನನ್ನ ಹೇಳಿಕೆ ರಾಷ್ಟ್ರೀಯ ಏಕತೆ, ಆಸಕ್ತಿ ಮತ್ತು ಭಾರತಕ್ಕಾಗಿ ನಿಲ್ಲುವ ಹೇಳಿಕೆಯಾಗಿದೆ ಎಂದು ಹೇಳಿದ್ದರು.