ಚಾಮರಾಜನಗರ : ಮಹಿಳೆಯೋರ್ವಳನ್ನು ಮಚ್ಚಿನಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ದೊಳ್ಳಿಪುರ ಗ್ರಾಮದಲ್ಲಿ ಜರುಗಿದೆ. ಶುಭಾ (38) ಮೃತ ಮಹಿಳೆ. ಈತನ ಗಂಡ ಮಹೇಶ್ ಹಾಗೂ ಅತ್ತೆ ಭಾರತಿ ವಿರುದ್ಧ ಕೊಲೆ ಆರೋಪ ಕೇಳಿ ಬಂದಿದೆ.
ಮೃತ ಮಹಿಳೆಯು ಅತ್ತೆ ಹಾಗೂ ಗಂಡನ ಜೊತೆ ತೋಟದ ಮನೆಯಲ್ಲಿ ವಾಸಿಸುತ್ತಿದ್ದರು. ಆದರೆ ಇಂದು ಬೆಳಿಗ್ಗೆ ಯಾರೋ ಕೊಲೆ ಮಾಡಿದ್ದಾರೆ ಎಂದು ಮೃತ ಮಹಿಳೆಯ ಗಂಡ ಮಹೇಶ್, ದೂರವಾಣಿ ಮೂಲಕ ಪೊಲೀಸ್ ಠಾಣೆಗೆ ವಿಷಯ ಮುಟ್ಟಿಸಿದ್ದ. ಅಲ್ಲದೆ ಬೆಂಗಳೂರಿನಲ್ಲಿರುವ ಶುಭಾ ಅವರ ತಂಗಿ ಶೃತಿಗೂ ಸಹ ಮಹೇಶ್ ಕರೆ ಮಾಡಿ ವಿಷಯ ತಿಳಿಸಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಎಎಸ್ಪಿ ಶಶಿಧರ್, ಡಿವೈಎಸ್ಪಿ ಹಾಗೂ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಹಣಕಾಸಿನ ವಿಚಾರದಲ್ಲಿ ನನ್ನ ಅಕ್ಕ ಶುಭಾಳನ್ನು ಅವಳ ಪತಿ ಮಹೇಶ್ ಮತ್ತು ಅತ್ತೆ ಭಾರತಿ ಆಗಿಂದಾಗ್ಗೆ ಪೀಡಿಸುತ್ತಿದ್ದರು. ನಿಮ್ಮ ಅಪ್ಪನ ಮನೆಯಿಂದ ಹಣ ತಂದುಕೊಡು ಎಂದು ಕಿರುಕುಳ ನೀಡುತ್ತಿದ್ದರು. ಈ ವಿಚಾರದಿಂದ ನನ್ನ ಅಕ್ಕ ಶುಭಾಳಿಗೆ ಮಹೇಶ್ ಮತ್ತು ಆತನ ತಾಯಿ ಭಾರತಿ ಯಾವುದೋ ಆಯುಧದಿಂದ ಹೊಡೆದು ಕೊಂದಿದ್ದಾರೆ ಎಂದು ಶುಭಾ ಅವರ ತಂಗಿ ಶೃತಿ ಅನುಮಾನ ವ್ಯಕ್ತಪಡಿಸಿ ಮಹೇಶ್ ಹಾಗೂ ಭಾರತಿ ಅವರ ವಿರುದ್ದ ದೂರು ನೀಡಿದ್ದಾರೆ.
ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೂರ್ವ ಪೊಲೀಸ್ ಠಾಣೆಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.