ಮಂಗಳೂರು:- ಬಂಟ್ವಾಳದ ಅಬ್ದುಲ್ ರಹಿಮಾನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೋರ್ವ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
33 ವರ್ಷದ ಶಿವಪ್ರಸಾದ್ ಬಂಧಿತ ಆರೋಪಿ. ಬಂಟ್ವಾಳದ ರಾಯಿ ಎಂಬಲ್ಲಿ ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು, ನ್ಯಾಯಾಲಯಕ್ಕೆ ಪೊಲೀಸರು ಹಾಜರುಪಡಿಸಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ಕೋರ್ಟ್ ಪೊಲೀಸ್ ಕಸ್ಟಡಿಗೆ ನೀಡಿದೆ. ಪ್ರಕರಣ ಸಂಬಂಧ ದೀಪಕ್ (21), ಪೃಥ್ವಿರಾಜ್ (21), ಚಿಂತನ್ (19), ಸುಮಿತ್, ರವಿರಾಜ್ ಸೇರಿ 9 ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ.
ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಹಳೇ ದ್ವೇಷದ ಹಿನ್ನೆಲೆ ಈ ಹತ್ಯೆ ನಡೆಸಿದ್ದಾರೆ ಎನ್ನುವುದು ಬೆಳಕಿಗೆ ಬಂದಿದೆ. ಆದರೆ ನಿಖರ ಕಾರಣ ಇನ್ನೂ ನಿಗೂಢವಾಗಿಯೇ ಉಳಿದಿದೆ. ಪೂರ್ವದ್ವೇಷದ ಹತ್ಯೆಯೋ, ಕೋಮುದ್ವೇಷದ ಹತ್ಯೆಯೋ, ಸುಹಾಸ್ ಶೆಟ್ಟಿ ಹತ್ಯೆಗೆ ಪ್ರತಿಕಾರದ ಹತ್ಯೆಯೋ ಅನ್ನೋದು ಖಚಿತಗೊಂಡಿಲ್ಲ. ಬಂಟ್ವಾಳ ಡಿವೈಎಸ್‌ಪಿ ವಿಜಯ್ ಪ್ರಸಾದ್ ನೇತೃತ್ವದಲ್ಲಿ 5 ವಿಶೇಷ ತಂಡಗಳನ್ನ ಮಾಡಿ ತನಿಖೆ ನಡೆಸುತ್ತಿದ್ದು, ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದಾರೆ.