ತುಮಕೂರು: ಕರ್ನಾಟಕದಲ್ಲಿ ಹೃದಯಾಘಾತದಿಂದ ಸಾವನ್ನಪ್ಪುವವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಆಘಾತಕಾರಿಯೆಂದರೆ, ಈ ಸಾವಿನ ಸರಣಿಯಲ್ಲಿ ಯುವ ಸಮೂಹದವರೇ ಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾಗುತ್ತಿದ್ದಾರೆ.
ಇದೀಗ ಹೃದಯಾಘಾತಕ್ಕೆ ತುಮಕೂರಿನಲ್ಲಿ ಬಿಜೆಪಿಯ ಯುವ ಮುಖಂಡ ಮೃತಪಟ್ಟಿರುವ ಘಟನೆ ತುಮಕೂರು ತಾಲ್ಲೂಕಿನ ಹೆಬ್ಬಾಕ ಗ್ರಾಮದಲ್ಲಿ ನಡೆದಿದೆ. ನೀಲಕಂಠಸ್ವಾಮಿ (36) ಮೃತ ದುರ್ಧೈವಿಯಾಗಿದ್ದು, ತುಮಕೂರಿನ ಕುವೆಂಪು ನಗರದಲ್ಲಿ ನೀಲಕಂಠಸ್ವಾಮಿ ಅವರು ಇದ್ದಕ್ಕಿದ್ದಂತೆ ತಲೆಸುತ್ತಿ ಬಿದ್ದಿದ್ದಾರೆ.
ಕೂಡಲೇ ಸ್ಥಳೀಯರು ಅವರನ್ನು ಸಿದ್ಧಗಂಗಾ ಆಸ್ಪತ್ರೆಗೆ ದಾಖಲಿಸಿದರು. ಆದರೆ, ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ನೀಡಿದ್ದರೂ ಕೂಡ ಹೃದಯಾಘಾತದಿಂದ ಉಂಟಾದ ತೀವ್ರತೆಯಿಂದಾಗಿ ಚಿಕಿತ್ಸೆ ಫಲಕಾರಿಯಾಗಲಿಲ್ಲ. ವೈದ್ಯರು ತೀವ್ರ ಪ್ರಯತ್ನ ನಡೆಸಿದರೂ, ನೀಲಕಂಠಸ್ವಾಮಿ ಕೊನೆಯುಸಿರೆಳೆದರು. ಈ ಘಟನೆಯು ಹೊಸ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.