ಕೆಜಿಎಫ್ ಸಿನಿಮಾದ ಬಳಿಕ ರಾಕಿಂಗ್ ಸ್ಟಾರ್ ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಖ್ಯಾತಿ ಘಳಿಸಿದ್ದಾರೆ. ದೊಡ್ಡ ದೊಡ್ಡ ಪ್ರಾಜೆಕ್ಟ್ ಗಳನ್ನ ಒಪ್ಪಿಕೊಂಡಿರುವ ಯಶ್ ನಟನೆಯ ಜೊತೆಗೆ ನಿರ್ಮಾಪಕರಾಗಿಯೂ ಗುತಿಸಿಕೊಂಡಿದ್ದಾರೆ. ಸದ್ಯ ಯಶ್ ಬಳಿ ಹಲವು ಐಷಾರಾಮಿ ಕಾರುಗಳಿದ್ದು ಆ ಸಾಲಿಗೆ ಇದೀಗ ಮತ್ತೊಂದು ದುಭಾರಿ ಬೆಲೆಯ ಕಾರು ಸೇರ್ಪಡೆಯಾಗಿದೆ. ಕೇವಲ ಕಾರು ಮಾತ್ರವಲ್ಲ ಅದರ ನಂಬರ್ ಪ್ಲೇಟ್ ಕೂಡ ಪ್ರತಿಯೊಬ್ಬರ ಗಮನ ಸೆಳೆಯುತ್ತಿದೆ.
ಯಶ್ ಸದ್ಯ ಟಾಕ್ಸಿಕ್ ಹಾಗೂ ರಾಮಾಯಣ ಸಿನಿಮಾದ ಶೂಟಿಂಗ್ ನಲ್ಲಿ ತೊಡಗಿಕೊಂಡಿದ್ದಾರೆ. ಶೂಟಿಂಗ್ ಗಾಗಿ ಹೆಚ್ಚಿನ ಸಮಯ ಮುಂಬೈಗೆ ಪ್ರಯಾಣಿಸುತ್ತಿರುತ್ತಾರೆ. ಹೀಗಾಗಿ ಅಲ್ಲಿನ ಓಡಾಟಕ್ಕಾಗಿ ಐಶಾರಾಮಿ ಕಾರು ಖರೀದಿ ಮಾಡಿದ್ದಾರೆ. ರಣ್ಬೀರ್ ಕಪೂರ್, ಶಾರುಖ್ ಖಾನ್ ಅಂಥಹಾ ಸ್ಟಾರ್ ಹೀರೋಗಳ ಮಾತ್ರವೇ ಇರುವ ಲೆಕ್ಸಸ್ನ ಎಲ್ಎಂ 350ಎಚ್ 4ಎಸ್ ಅಲ್ಟ್ರಾ ಲೆಕ್ಷುರಿ ಕಾರನ್ನು ಯಶ್ ಖರೀದಿ ಮಾಡಿದ್ದಾರೆ. ಈ ಕಾರು ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಯಶ್ ಖರೀದಿ ಮಾಡಿರುವ ಲೆಕ್ಸಸ್ನ ಎಲ್ಎಂ 350ಎಚ್ 4ಎಸ್ ಅಲ್ಟ್ರಾ ಲೆಕ್ಷುರಿ ಕಾರಿನ ಬೆಲೆ ಸುಮಾರು 3 ಕೋಟಿ ಇದೆ (ಆನ್ ರೋಡ್) ಈ ಕಾರಿನ ಎಕ್ಸ್ ಶೋರೂಂ ಬೆಲೆಯೇ 2.65 ಕೋಟಿ ರೂಪಾಯಿಗಳಿದೆ. ನೀಲಿ ಬಣ್ಣದ ಕಾರನ್ನು ಯಶ್ ಖರೀದಿ ಮಾಡಿದ್ದು, ಏಪ್ರಿಲ್ ತಿಂಗಳಲ್ಲಿ ಈ ಕಾರಿನ ನೊಂದಣಿ ಆಗಿದೆ. ವಿಶೇಷವೆಂದರೆ ಮಹಾರಾಷ್ಟ್ರದಲ್ಲಿ ಈ ಕಾರಿನ ನೊಂದಣಿಯನ್ನು ಯಶ್ ಮಾಡಿಸಿದ್ದಾರೆ.
ಸದ್ಯ ಖರೀದಿಸಿರುವ ಹೊಸ ಕಾರಿನಲ್ಲಿ ಮುಂಬೈ ಏರ್ ಪೋರ್ಟ್ಗೆ ರಾಕಿ ಭಾಯ್ ಬಂದಿಳಿದ್ದಾರೆ. ಯಶ್ ಹೊಸ ಕಾರ್ ಮೇಲೆ MH47C 8055 ನಂಬರ್ ಪ್ಲೇಟ್ ಅಳವಡಿಸಲಾಗಿದೆ. ಈಗಾಗಲೇ ಯಶ್ ಬಳಿ ಇರೋ ಎಲ್ಲಾ ಕಾರ್ಗಳ ನಂಬರ್ ಪ್ಲೇಟ್ 8055 ಇದೇ ನಂಬರಿನಲ್ಲಿದೆ.