ದಾವಣಗೆರೆ:- ಕರ್ನಾಟಕದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳ ನಿಲ್ಲುತ್ತಿಲ್ಲ. ಇಷ್ಟು ದಿನ ಕೊಂಚ ತಣ್ಣಗಾಗಿದ್ದ ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳ ಕಿರುಕುಳ ಇದೀಗ ಮತ್ತೆ ಮುಂದುವರಿದಿದೆ.
ಅದರಂತೆ ದಾವಣಗೆರೆ ಜಿಲ್ಲೆ ಹರಿಹರದ ಹಮಾಲರ ಕಾಲೋನಿಯಲ್ಲಿ ವಾಸವಾಗಿರುವ ವೃದ್ಧ ದಂಪತಿಯನ್ನು ಮೈಕ್ರೋ ಫೈನಾನ್ಸ್ ಸಿಬ್ಬಂದಿ ಮನೆಯಿಂದ ಹೊರಗೆ ಹಾಕಿ, ಬೀಗ ಜಡಿದು ನೋಟಿಸ್ ಅಂಟಿಸಿ ಹೋಗಿದ್ದಾರೆ.
ಅಕ್ಬರ್ ಸಾಬ್ (85), ಫಾತೀಮಾ (65) ದಂಪತಿ ನಾಲ್ಕು ವರ್ಷಗಳ ಹಿಂದೆ ಮೈಕ್ರೋ ಫೈನಾನ್ಸ್ನಲ್ಲಿ 7 ಲಕ್ಷ ರೂ. ಸಾಲ ಪಡೆದಿದ್ದರು. ಪ್ರತಿ ತಿಂಗಳು 18 ಸಾವಿರ ಹಣ ಪಾವತಿಸುತ್ತಿದ್ದರು. ಕಳೆದ ಐದು ತಿಂಗಳಿನಿಂದ ವೃದ್ಧ ದಂಪತಿಗೆ ಹಣ ಕಟ್ಟಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಜೂನ್ 2ರಂದು ವೃದ್ಧ ದಂಪತಿಯನ್ನು ಮನೆಯಿಂದ ಹೊರಗೆ ದಬ್ಬಿ, ಬೀಗ ಹಾಕಿಕೊಂಡು ಹೋಗಿದ್ದಾರೆ.
ಇದರಿಂದ, ವೃದ್ಧ ದಂಪತಿ ಕಳೆದ ಒಂದು ತಿಂಗಳಿನಿಂದ ಸೂರು ಇಲ್ಲದೆ ಮನೆಯ ಬಾಗಿಲಿನಲ್ಲೇ ಜೀವನ ಸಾಗಿಸುತ್ತಿದ್ದಾರೆ.