ವಿಜಯಸಾಕ್ಷಿ ಸುದ್ದಿ, ಗದಗ: ಸಮಾಜಮುಖಿಯಾದ ವೈದ್ಯಕೀಯ ಸೇವೆಯನ್ನು ಸಮಾಜವು ಗೌರವಿಸುತ್ತದೆ. ನಾಡಿನ ಅನೇಕ ವೈದ್ಯರು ದಯೆ, ಕರುಣೆ, ನಿಸ್ವಾರ್ಥದಿಂದ ಸೇವೆ ಮಾಡುತ್ತಿದ್ದಾರೆ. ಅಂತಹ ವೈದ್ಯರುಗಳನ್ನು ಗುರುತಿಸಿ ಅಭಿನಂದಿಸಬೇಕು ಎಂದು ಹಿರಿಯ ವೈದ್ಯರಾದ ಡಾ. ಜಿ. ಬಿ. ಪಾಟೀಲ ನುಡಿದರು.
ಗದುಗಿನ ಡಾ. ಪುರದ ಪ್ರತಿಷ್ಠಾನ ಹಾಗೂ ಪುರದ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್‌ನ ಸಹಯೋಗದಲ್ಲಿ ಜರುಗಿದ ರಾಷ್ಟ್ರೀಯ ವೈದ್ಯರ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ಕೊರೋನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಜೀವದ ಹಂಗು ತೊರೆದು ಸೇವೆ ಮಾಡಿದ ವೈದ್ಯಕೀಯ ಕ್ಷೇತ್ರದ ಎಲ್ಲರ ಕಾರ್ಯವನ್ನು ಮರೆಯಲಾಗದು. ಇಂದು ಎಲ್ಲವೂ ವ್ಯಾವಹಾರಿಕವಾಗಿದೆ. ಆಧುನಿಕ, ಆವಿಷ್ಕಾರಿತ ವೈದ್ಯಕೀಯ ಕ್ಷೇತ್ರವು ಇದಕ್ಕೆ ಹೊರತಲ್ಲ. ವೈದ್ಯರುಗಳು ರೋಗದ ಅವಸ್ಥೆಗಳಿಗೆ ತಕ್ಕಂತೆ ಚಿಕಿತ್ಸೆ ಮಾಡುತ್ತಾರೆ. ಕೆಲವೊಮ್ಮೆ ರೋಗ ಹತೋಟಿಯಾಗಲಾರದೇ ರೋಗ ಉಲ್ಬಣಿಸಬಹುದು ಮತ್ತು ಕೆಲವೊಮ್ಮೆ ಚಿಕಿತ್ಸೆ ನಿಷ್ಫಲವಾಗಬಹುದು. ಆದರೆ ವೈದ್ಯರಲ್ಲಿ ವಿಶ್ವಾಸವಿಟ್ಟು ಚಿಕಿತ್ಸೆ ಪಡೆಯಬೇಕೆಂದರು.
ಇನ್ನೋರ್ವ ವೈದ್ಯರಾದ ಡಾ. ವಿ.ಎಸ್. ಆಡೂರ ಮಾತನಾಡಿ, ವೈದ್ಯರನ್ನು ದೇವರೆಂದು ಗೌರವಿಸುವ ಸಮಾಜಕ್ಕೆ ನಾವು ಋಣಿಯಾಗಿದ್ದೇವೆ. ವೈದ್ಯರೊಂದಿಗೆ ಸಹ ಸಿಬ್ಬಂದಿಗಳ ಸಹಕಾರ ಮತ್ತು ಸಮಯೋಚಿತ ಚಿಕಿತ್ಸೆ ಯಶಸ್ವಿಯಾಗುವಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಡಾ. ಉಮೇಶ ಪುರದ ಮಾತನಾಡುತ್ತ, ರೋಗಿಗಳ ವಿಶ್ವಾಸ ವೈದ್ಯರುಗಳಿಗೆ ಶಕ್ತಿ ತುಂಬುತ್ತವೆ. ದೀರ್ಘಕಾಲೀನ ರೋಗಗಳಲ್ಲಿ ಆಯುರ್ವೇದ ಚಿಕಿತ್ಸೆ ಪರಿಣಾಮಕಾರಿಯಾಗಿದೆ ಎಂದರು.
ವೈದ್ಯರುಗಳಾದ ಡಾ. ಜಿ.ಎಸ್. ಹಿರೇಮಠ ಮತ್ತು ಡಾ. ವಿ.ಎಸ್. ಆಡೂರ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ವೇದಿಕಯ ಮೇಲೆ ಪ್ರಾಚಾರ್ಯರಾದ ಸಿಬಿಲ್ ನಿಲೂಗಲ್, ಜಯಶ್ರೀ ಪುರದ ಉಪಸ್ಥಿತರಿದ್ದರು. ವೈದ್ಯರ ದಿನಾಚರಣೆ ಕುರಿತು ಸುಜಾತಾ, ರಾಜೇಶ್ವರಿ, ಪೂಜಾ ಮತ್ತು ಶಿಫಾ ಮಾತನಾಡಿದರು. ಸೌಮ್ಯ, ಪುಷ್ಪ, ಶ್ರೀದೇವಿ ಅವರಿಂದ ಪ್ರಾರ್ಥನೆ ಜರುಗಿತು. ಕರುಣಾ ಸ್ವಾಗತಿಸಿದರು. ರೂಪಾ ಕಾರ್ಯಕ್ರಮ ನಿರೂಪಿಸಿದರು. ಡಾ. ಶಂಭು ಪುರದ ಅತಿಥಿಗಳನ್ನು ಪರಿಚಯಿಸಿದರು. ಕೊನೆಯಲ್ಲಿ ಸಿದ್ದಮ್ಮ ವಂದಿಸಿದರು.
ಹಿರಿಯ ವೈದ್ಯರಾದ ಡಾ. ಜಿ.ಎಸ್. ಹಿರೇಮಠ ಮಾತನಾಡುತ್ತ, ಕೇವಲ ರೋಗ ಬಂದಾಗ ಔಷಧಿ ಪಡೆಯುವುದು ಚಿಕಿತ್ಸೆಯಲ್ಲ, ರೋಗ ಬರದಂತೆ ತಡೆಯುವ ಜೀವನ ಶೈಲಿಯನ್ನು ರೂಢಿಸಿಕೊಳ್ಳಬೇಕಾದುದು ಇಂದಿನ ಅಗತ್ಯವಾಗಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಆವಿಷ್ಕಾರಗಳಾಗಿವೆ. ಆದರೆ ಜೀವನ ಶೈಲಿಯಲ್ಲಿಯೂ ವ್ಯತ್ಯಾಸವಾಗಿದೆ. ಹೀಗಾಗಿ ವಯಸ್ಕರಲ್ಲಿಯೂ ಇಂದು ಹೃದಯಾಘಾತವಾಗುತ್ತಿದೆ. ಸಾರ್ವಜನಿಕರು ಆಯುರ್ವೇದದಲ್ಲಿ ಹೇಳಿದ ದಿನಚರಿ, ಋತುಚರಿಗಳನ್ನು ಆಚರಿಸಿಕೊಳ್ಳಬೇಕಾದ ಅಗತ್ಯತೆ ಇದೆ ಎಂದರು.