ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ನನ್ನ ಸೇವಾವಧಿಯಲ್ಲಿ ಎಲ್ಲ ಕಾಲೇಜುಗಳ ಪ್ರಾಂಶುಪಾಲರ, ಸಿಬ್ಬಂದಿಗಳ ಸಹಕಾರದಿಂದ ನಿರ್ವಹಿಸಿದ ಹುದ್ದೆ ಖುಷಿ ನೀಡಿದೆ. ಪ್ರಾಧ್ಯಾಪಕನಾಗಿದ್ದಾಗ ಮಕ್ಕಳ ಜೊತೆಗೆ ಪಡೆದ ವೃತ್ತಿ ಅನುಭವವನ್ನು ಎಂದೂ ಮರೆಯಲು ಸಾಧ್ಯವಿಲ್ಲ. ಆದ್ದರಿಂದ ನಿವೃತ್ತಿ ಜೀವನವನ್ನು ಸಮಾಜಮುಖಿ ಚಿಂತನೆಗಳಲ್ಲಿ ತೊಡಗಿಸಿಕೊಳ್ಳುವೆ ಎಂದು ಕಾಲೇಜು ಶಿಕ್ಷಣ ಇಲಾಖೆಯ ಧಾರವಾಡ ಪ್ರಾದೇಶಿಕ ಕೇಂದ್ರದ ಜಂಟಿ ನಿರ್ದೇಶಕ ಪ್ರೊ. ಪ್ರಕಾಶ ಹೊಸಮನಿ ಹೇಳಿದರು.
ಪಟ್ಟಣದ ಮರಿಯಪ್ಪ ಬಾಳಪ್ಪ ಕಳಕೊಣ್ಣವರ ಸರ್ಕಾರಿ ಪ್ರಥಮದರ್ಜೆ ಮಹಾವಿದ್ಯಾಲಯದಲ್ಲಿ ಸೋಮವಾರ ಆಯೋಜನೆ ಮಾಡಲಾಗಿದ್ದ ಅವರ ಸೇವಾ ನಿವೃತ್ತಿ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಗ್ರಾಮೀಣ ಪ್ರದೇಶದ ಕಾಲೇಜುಗಳಲ್ಲಿ ಹೆಚ್ಚಿನ ಕಾಲ ಬೋಧಕನಾಗಿ, ಪ್ರಾಂಶುಪಾಲನಾಗಿ ಪಡೆದ ಅನುಭವಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಸಧೃಡ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಹಾಗೂ ಪದವಿ ಹಂತದ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದಾಗಿದೆ. ಅಂತಹ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ, ಪ್ರಾದೇಶಿಕ ಕೇಂದ್ರದ ಜಂಟಿ ನಿರ್ದೇಶಕನಾಗಿ ನಿವೃತ್ತಿ ಪಡೆಯುತ್ತಿರುವುದು ನನ್ನ ಸೇವೆಯಲ್ಲಿ ಸ್ಮರಣೀಯ ದಿನಗಳಾಗಿವೆ. ನಿವೃತ್ತಿಯ ಕೊನೆಯ ದಿನದವೆರೆಗೂ ಸರ್ಕಾರಿ ಕೆಲಸ ದೇವರ ಕೆಲಸ ಎಂದು ನಂಬಿ ಸೇವೆ ಮಾಡಿರುವೆ. ಸೇವಾ ದಿನಗಳಲ್ಲಿ ಮಾಡಿದ ಕೆಲಸ ಆತ್ಮತೃಪ್ತಿ ನೀಡಿದೆ ಎಂದು ಹೇಳಿ ತಮ್ಮ ಸೇವೆಯ ದಿನಗಳನ್ನು ಸ್ಮರಿಸಿಕೊಂಡರು.
ನಿವೃತ್ತ ಪ್ರಾಂಶುಪಾಲ ಎಫ್.ಎಸ್. ಸಿದ್ನೇಕೊಪ್ಪ ಮಾತನಾಡಿದರು. ಈ ಸಂದರ್ಭದಲ್ಲಿ ಈ.ಆರ್. ಲಗಳೂರ, ಎಸ್.ಜಿ. ಕೇಶಣ್ಣವರ, ಆರ್.ಎಂ. ಕಲ್ಲನಗೌಡರ, ಡಿ.ಬಿ. ಗವಾನಿ, ಉಮೇಶ ಹಿರೇಮಠ, ಉಮೇಶ ಅರಹುಣಸಿ, ಕಮತಗಿ, ಆನಂದ ಲಾಲಸಿಂಗ್, ಕೃಷ್ಣಾ, ಬಿ.ಎಚ್. ಕೊಳ್ಳಿ, ಗಿರಿರಾಜ, ಶೋಭಾ ಮೆರವಾಡೆ, ಜ್ಯೋತಿ ಬೋಳಣ್ಣವರ, ಲಕ್ಷ್ಮೀ ನಾಗರಾಳ, ಧಾರವಾಡ, ಗದಗ, ಹಾವೇರಿ ಜಿಲ್ಲೆಯ ವಿವಿಧ ಕಾಲೇಜುಗಳ ಪ್ರಾಂಶುಪಾಲರು, ಪ್ರಾಧ್ಯಾಪಕರು ಪಾಲ್ಗೊಂಡಿದ್ದರು.
ನರೇಗಲ್ಲ ಕಾಲೇಜಿನ ಪ್ರಾಂಶುಪಾಲ ಎಸ್.ಎಲ್. ಗುಳೇದಗುಡ್ಡ ಮಾತನಾಡಿ, ಹೊಸಮನಿಯವರು ಕಾಲೇಜಿಗೆ ಬರುವ ಎಲ್ಲರೊಂದಿಗೂ ಆತ್ಮೀಯತೆಯಿಂದ ಬೆರೆಯುತ್ತಿದ್ದರು. ನಮ್ಮ ಕಾಲೇಜಿನ ಮೇಲೆ ಬಹಳಷ್ಟು ಪ್ರೀತಿಯನ್ನು ಹೊಂದಿದ್ದರು ಎಂದರು.