ವಿಜಯಸಾಕ್ಷಿ ಸುದ್ದಿ, ಗದಗ: ಗದಗ-ಬೆಟಗೇರಿ ಅಂಜುಮನ್-ಎ-ಇಸ್ಲಾಂ ಸಂಸ್ಥೆಯ ಆಡಳಿತ ಮಂಡಳಿಗೆ ನಡೆಯಬೇಕಿರುವ ಚುನಾವಣೆ ಪ್ರಕ್ರಿಯೆಯನ್ನು ಅನಗತ್ಯವಾಗಿ ವಿಳಂಬಗೊಳಿಸಲಾಗುತ್ತಿದೆ. ಶಿಕ್ಷಣ ಮತ್ತು ಸಮುದಾಯ ಸೇವೆಯಲ್ಲಿ ಅಪಾರ ಸೇವೆ ಸಲ್ಲಿಸುತ್ತಿರುವ ಇಂತಹ ಮಹತ್ವದ ಸಂಸ್ಥೆಯ ಆಡಳಿತಾತ್ಮಕ ಶಿಷ್ಟಾಚಾರಗಳ ಹಾಗೂ ಬದ್ಧತೆಯ ದಿಕ್ಕು ತಪ್ಪಿಸುವ ಪರಿಸ್ಥಿತಿ ನಿರ್ಮಾಣವಾಗುತ್ತಿರುವುದನ್ನು ಎಸ್‌ಡಿಪಿಐ ಗದಗ ಜಿಲ್ಲಾಧ್ಯಕ್ಷ ಬಿಲಾಲ ಗೋಕಾವಿ ಖಂಡಿಸಿದ್ದಾರೆ.
ಯಾವುದೇ ಸ್ಥಳೀಯ ರಾಜಕೀಯ ವ್ಯಕ್ತಿಗಳ ಅಥವಾ ರಾಜಕಾರಣಿಗಳ ಬಾಹ್ಯ ಒತ್ತಡಗಳ ಅಡಿಯಲ್ಲಿ ನಿರ್ಧಾರಗಳನ್ನು ಕೈಗೊಳ್ಳದೆ, ಸಂಪೂರ್ಣವಾಗಿ ನ್ಯಾಯಸಮ್ಮತ, ಪಾರದರ್ಶಕ ಮತ್ತು ಸಮಯಬದ್ಧವಾಗಿ ಚುನಾವಣೆ ಪ್ರಕ್ರಿಯೆಯನ್ನು ನಡೆಸಬೇಕು.
ಸ್ಥಳೀಯ ಸಮುದಾಯದ ನಂಬಿಕೆ ಮತ್ತು ವಿಶ್ವಾಸ ಉಳಿಸಿಕೊಳ್ಳಬೇಕಾದದ್ದು ಸಂಬಂಧಿತ ಆಡಳಿತ ಮತ್ತು ಚುನಾವಣೆ ಅಧಿಕಾರಿಗಳ ನೈತಿಕ ಜವಾಬ್ದಾರಿಯಾಗಿದೆ. ಶೀಘ್ರದಲ್ಲಿ ಚುನಾವಣೆ ಘೋಷಣೆ ಮಾಡದಿದ್ದಲ್ಲಿ ಮುಂದೆ ಗದಗ ನಗರದ ಜಾಗೃತ ಯುವ ಸಮೂಹ ಹಾಗೂ ಸಮಾಜದ ಮುಖಂಡರು ಸೇರಿ ವಕ್ಫ್ ಇಲಾಖೆ ಅಧಿಕಾರಿಗಳ ವಿರುದ್ಧ ಗದಗ ಜಿಲ್ಲಾಧಿಕಾರಿ ಕಛೇರಿ ಮುಂದೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.