ಚಿಕ್ಕಮಗಳೂರು:- ನಿಗೂಢವಾಗಿ ಫಾರೆಸ್ಟ್ ಗಾರ್ಡ್ ಓರ್ವರು ನಾಪತ್ತೆಯಾಗಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನ ನೀಲಗಿರಿ ಪ್ಲಾಂಟೇಶನ್ನಲ್ಲಿ ಜರುಗಿದೆ. ಶರತ್ ನಾಪತ್ತೆಯಾಗಿರುವ ಫಾರೆಸ್ಟ್ ಗಾರ್ಡ್.
ಕಳೆದ 6 ದಿನಗಳಿಂದ ನೂರಾರು ಅರಣ್ಯ ಸಿಬ್ಬಂದಿ ಸೇರಿ ಪೊಲೀಸರು, ನೀಲಗಿರಿ ಪ್ಲಾಂಟೇಶನ್ ಮತ್ತು ಅರಣ್ಯದಲ್ಲಿ ಹುಡುಕಾಟ ನಡೆಸಿದರೂ ಗಾರ್ಡ್ ಸುಳಿವು ಮಾತ್ರ ಸಿಗುತ್ತಿಲ್ಲ. ಜಿಲ್ಲೆಯ ಕಡೂರು ತಾಲೂಕಿನ ನೀಲಗಿರಿ ಪ್ಲಾಂಟೇಶನ್ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕೊಡಗು ಜಿಲ್ಲೆಯ ಕಾಲೂರು ಗ್ರಾಮದ 33 ವರ್ಷದ ಫಾರೆಸ್ಟ್ ಗಾರ್ಡ್ ಶರತ್, ಕಳೆದ 6 ದಿನಗಳಿಂದ ನಾಪತ್ತೆಯಾಗಿದ್ದಾರೆ. ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣ ಅರಣ್ಯ ವಿಭಾಗಕ್ಕೆ ಮಂಗಳೂರಿನ ಸುಳ್ಯದಿಂದ ಕಳೆದ 6 ತಿಂಗಳ ಹಿಂದೆ ವರ್ಗಾವಣೆಯಾಗಿ ಬಂದಿದ್ದರು.
ಜೂನ್ 24ರಂದು ಸಖರಾಯಪಟ್ಟಣ ಅರಣ್ಯದ ನೀಲಗಿರಿ ಪ್ಲಾಂಟೇಶನ್ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಶರತ್ ನಾಪತ್ತೆ ಆಗಿದ್ದರು. ನೀಲಗಿರಿ ಪ್ಲಾಂಟೇಶನ್ ಸಮೀಪದ ಅರಣ್ಯದಲ್ಲಿ ಶರತ್ ಬೈಕ್ ಪತ್ತೆಯಾಗಿದ್ದರೆ, ಬೈಕ್ ಸಿಕ್ಕ ಸ್ಥಳದಿಂದ ಎರಡು ಕಿಮೀ ದೂರದಲ್ಲಿ ಬಟ್ಟೆ ಸಿಕ್ಕಿದ್ದು, ನಾಪತ್ತೆ ಬಗ್ಗೆ ನೂರಾರು ಅನುಮಾನಗಳು ಮೂಡಿವೆ. ಶರತ್ ನಾಪತ್ತೆ ಸಂಬಂಧ ಪೋಷಕರು ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.