HomeGadag Newsವಚನ ಸಾಹಿತ್ಯದ ತತ್ವಗಳನ್ನು ಮೈಗೂಡಿಸಿಕೊಳ್ಳಿ

ವಚನ ಸಾಹಿತ್ಯದ ತತ್ವಗಳನ್ನು ಮೈಗೂಡಿಸಿಕೊಳ್ಳಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ಯುವಜನಾಂಗ ವಚನ ಸಾಹಿತ್ಯದ ತತ್ವಗಳನ್ನು ಅರಿತು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಕಾಯಕ, ದಾಸೋಹ ಸಿದ್ಧಾಂತಗಳಡಿ ನವ ಸಮಾಜ ನಿರ್ಮಾಣ ಮಾಡಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಹೇಳಿದರು.

ನಗರದ ಶ್ರೀ ಜಗದ್ಗುರು ತೋಂಟದಾರ್ಯ ಕಲ್ಯಾಣ ಮಂಟಪದಲ್ಲಿ ಬುಧವಾರ ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರುಗಳ ಸಹಯೋಗದಲ್ಲಿ ಡಾ. ಫ.ಗು. ಹಳಕಟ್ಟಿಯವರ ಜನ್ಮದಿನದ ನಿಮಿತ್ತ `ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕಬರಸಾಬ್ ಬಬರ್ಚಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಎಡೆಯೂರು ಶ್ರೀ ಜಗದ್ಗುರು ತೊಂಟದಾರ್ಯ ಸಂಸ್ಥಾನ ಮಠದ ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿ, ಸಂಶೋಧಕ ಮತ್ತು ಸಾಹಿತ್ಯ ಪ್ರಚಾರಕರಾದ ಡಾ. ಫ.ಗು. ಹಳಕಟ್ಟಿಯವರು ವಕೀಲ ವೃತ್ತಿ ನಿರ್ವಹಿಸುತ್ತಿದ್ದರು. ಇಡೀ ರಾಜ್ಯಾದ್ಯಂತ ಅಲೆದಾಡಿ 12ನೇ ಶತಮಾನದ ಅನೇಕ ವಚನಗಳನ್ನು ಸಂಗ್ರಹಿಸಿ ವಚನ ಸಾಹಿತ್ಯವನ್ನು ಶಾಶ್ವತವಾಗಿ ಉಳಿಸುವಲ್ಲಿ ಶ್ರಮಿಸಿದರು. ಬ್ರಿಟಿಷ್‌ರ ಕಾಲದಲ್ಲಿ ಕನ್ನಡದ ಅತ್ಯಮೂಲ್ಯ ವಚನ ಸಾಹಿತ್ಯವನ್ನು ಪ್ರಕಟಿಸುವುದು ಸುಲಭ ಕಾರ್ಯವಾಗಿದ್ದಿಲ್ಲ. ಅವರಿಗೆ ಎದುರಾದ ಅಡೆ-ತಡೆಗಳನ್ನು ಎದುರಿಸಿ ಸಂಗ್ರಹಿಸಿದ ವಚನಗಳನ್ನು ಮುದ್ರಿಸಲು ತಮ್ಮ ಸ್ವಂತ ಮನೆಯನ್ನು ಮಾರಿರುವುದು ಅವರ ದೃಢವಾದ ಇಚ್ಛಾಶಕ್ತಿ ಎಂತಹದು ಎಂದು ತಿಳಿಯುತ್ತದೆ ಎಂದರು.

ವಿಶ್ರಾಂತ ಪ್ರಾಧ್ಯಾಪಕ ಡಾ. ಸಂಗಮನಾಥ ಲೋಕಾಪೂರ ಉಪನ್ಯಾಸ ನೀಡಿ ಮಾತನಾಡಿ, ಡಾ. ಫ.ಗು. ಹಳಕಟ್ಟಿಯವರು ಧಾರವಾಡದಲ್ಲಿ ಹುಟ್ಟಿ ವಿದ್ಯಾಭ್ಯಾಸ ಮುಗಿಸಿದ ನಂತರ ವಿಜಾಪುರದಲ್ಲಿ ತಮ್ಮ ವಕೀಲ ವೃತ್ತಿ ಪ್ರಾರಂಭಿಸಿದರು. ವಚನ ಸಾಹಿತ್ಯದ ಮೇಲಿನ ಅಪಾರ ಆಸಕ್ತಿಯಿಂದ ತಾಳೆಗರಿಯ ಪ್ರಾಚೀನ ಗ್ರಂಥಗಳನ್ನು ಸಂಪಾದಿಸಲು ಪ್ರಾಂಭಿಸಿ ವಚನ ಸಾಹಿತ್ಯವನ್ನು ಉಳಿಸಲು ಪಣತೊಟ್ಟರು. 1920ರ ಸಮಾರಿಗೆ ಸಾವಿರಾರು ಗ್ರಂಥಗಳ ಸಂಪಾದನೆ ಜೊತೆಗೆ ವಚನ ಸಂಗ್ರಹವನ್ನು ಮಾಡಿ ಸರಕಾರ, ಯುಜಿಸಿ, ಸಾರ್ವಜನಿಕ ಸಂಸ್ಥೆಗಳ ನೆರವಿಲ್ಲದೆ ಹಲವಾರು ವಚನಕಾರರನ್ನು ಬೆಳಕಿಗೆ ತರುವಲ್ಲಿ ಅವರು ಮಾಡಿದ ಮಹತ್ಕಾರ್ಯ ಇತಿಹಾಸ ನೆನಪಿಡುವಂತದಾಗಿದೆ ಎಂದರು.

ಕಾರ್ಯಕ್ರಮದಲ್ಲಿ ರಾಷ್ಟçಪ್ರಶಸ್ತಿ ವಿಜೇತ ಶಿಕ್ಷಕ ಎಸ್.ಎನ್. ಬಳ್ಳಾರಿ, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ, ವಾರ್ತಾಧಿಕಾರಿ ವಸಂತ ಮಡ್ಲೂರ ಸೇರಿದಂತೆ ಗಣ್ಯರು ಹಾಜರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ವೀರಯ್ಯ ಸ್ವಾಮಿ ಬಿ ಸ್ವಾಗತಿಸಿದರು. ಕಾರ್ಯಕ್ರದಲ್ಲಿ ಮೃತ್ಯುಂಜಯ ಹಿರೇಮಠ ಮತ್ತು ತಂಡದವರು ವಚನ ಸಂಗೀತ ಪ್ರಸ್ತುತಪಡಿಸಿದರು. ಪ್ರೊ. ಆರ್.ಬಿ. ಚಿನಿವಾಲರ ಕಾರ್ಯಕ್ರಮ ನಿರೂಪಿಸಿದರು.

ಕ್ರಿಶ್ಚಿಯನ್ ಮಿಷಿನರಿಯವರು ಇವರ ಗ್ರಂಥವನ್ನು ಮುದ್ರಿಸಲು ನಿರಾಕರಿಸಿದಾಗ ಮನೆಯನ್ನೇ ಮಾರಿ ಮುದ್ರಣಾಲಯನ್ನು ಸ್ಥಾಪಿಸಿ ಹಿತಚಿಂತಕ ಮುದ್ರಣಾಲಯ ಎಂದು ನಾಮಕರಣಗೊಳಿಸಿ ಮುದ್ರಣ ಕಾರ್ಯ ಆರಂಭ ಮಾಡಿದರು. ಶಿವಾನುಭವ ಪತ್ರಿಕೆ ಪ್ರಾರಂಭಿಸಿ ವಚನ ಸಾಹಿತ್ಯ ಶಾಶ್ವತವಾಗಿ ಉಳಿಯುವಂತೆ ಮಾಡಿದರು. 1926ರಲ್ಲಿ ಬಳ್ಳಾರಿಯಲ್ಲಿ ನಡೆದ 12ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. 1928ರ ಜೂನ್‌ನಲ್ಲಿ ನಡೆದ ಕರ್ನಾಟಕ ಏಕೀಕರಣ ಪರಿಷತ್ತಿನ 3ನೇ ಅಧ್ಯಕ್ಷ ಪದವಿ ಗೌರವ, ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಬ್ರಿಟಿಷ್ ಸರಕಾರದಿಂದ ರಾವ್ ಬಹದ್ದೂರ್ ಮತ್ತು ರಾವ್ ಸಾಹೇಬ ಪ್ರಶಸ್ತಿ, ವಚನ ಶಾಸ್ತ್ರ ಪ್ರವೀಣ, ವಚನ ಶಾಸ್ತ್ರ ಪಿತಾಮಹ ಮುಂತಾದ ಗೌರವಗಳಿಗೆ ಪಾತ್ರರಾದವರು ಎಂದು ಡಾ. ಸಂಗಮನಾಥ ಲೋಕಾಪೂರ ಉಪನ್ಯಾಸ ನೀಡಿದರು.

“ವಚನ ಸಾಹಿತ್ಯದ ಮೇಲಿನ ಕಾಳಜಿಯಿಂದ ಇಡೀ ರಾಜ್ಯಾದ್ಯಂತ ಅಲೆದಾಡಿ 12ನೇ ಶತಮಾನದ ಅನೇಕ ವಚನಗಳನ್ನು ಸಂಗ್ರಹಿಸಿ ವಚನ ಸಾಹಿತ್ಯವನ್ನು ಶಾಶ್ವತವಾಗಿ ಉಳಿಸುವಲ್ಲಿ ಹಳಕಟ್ಟಿಯವರ ಪಾತ್ರ ಮಹತ್ತರವಾಗಿದೆ. ಇಂತಹ ವಚನಗಳನ್ನು ಶ್ರಮವಹಿಸಿ ಸಂಗ್ರಹಿಸಿದ ಫ.ಗು. ಹಳಕಟ್ಟಿಯವರ ಕಾರ್ಯ ಶ್ಲಾಘನೀಯ. ಅರ್ಥಪೂರ್ಣ, ಅತ್ಯಮೂಲ್ಯ ವಚನಗಳನ್ನು ಉಳಿಸಿ-ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ”

– ಸಿ.ಎನ್ ಶ್ರೀಧರ್.

ಜಿಲ್ಲಾಧಿಕಾರಿಗಳು, ಗದಗ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!