ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಪುರಸಭೆಯ ವ್ಯಾಪ್ತಿಯಲ್ಲಿ ಬರುವ ಖಾಲಿ ನಿವೇಶನ, ನಿವೇಶನ, ವಾಣಿಜ್ಯ ಮಳಿಗೆ ಇತರೆ ಎಲ್ಲಾ ಮೂಲಗಳಿಂದ ತೆರಿಗೆ ಸಂಗ್ರಹ ಮಾಡುತ್ತಿದ್ದು, ತೆರಿಗೆ ಹಣ ಸರಿಯಾದ ರೀತಿಯಲ್ಲಿ ಬಳಕೆ ಆಗದೇ ಇರುವುದರಿಂದ ಪಟ್ಟಣದಲ್ಲಿ ಅಭಿವೃದ್ಧಿ ಕಾರ್ಯಗಳು ಮರೀಚಿಕೆಯಾಗಿವೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ ಶೆಟ್ಟಿ ಬಣ ತಾಲೂಕಾಧ್ಯಕ್ಷ ಮಹೇಶ ಕಲಘಟಗಿ ಹೇಳಿದರು.
ಅವರು ಬುಧವಾರ ಪಟ್ಟಣದ ಪುರಸಭೆಯಲ್ಲಿ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು.
ಪಟ್ಟಣದಲ್ಲಿ ಪುರಸಭೆಯಿಂದ ತೆರಿಗೆ ಸಂಗ್ರಹ ಮಾಡುತ್ತಿದ್ದು, ಖಾಲಿ ನಿವೇಶನಕ್ಕೆ ತೆಗೆದುಕೊಂಡ ತೆರಿಗೆ ಹಣ ಉಪಯೋಗವಾಗುತ್ತಿಲ್ಲ. ಖಾಲಿ ನಿವೇಶನದಲ್ಲಿ ಗಿಡ-ಗಂಟಿಗಳು ಬೆಳಿದಿವೆ. ತೆರಿಗೆಯಲ್ಲಿ ಆರೋಗ್ಯ, ಗ್ರಂಥಾಲಯ, ಭಿಕ್ಷುಕರ, ಸಾರಿಗೆ, ಘನತ್ಯಾಜ್ಯ ಉಪಕರ, ನೀರಿನ ಕರಗಳನ್ನು ವಸೂಲಿ ಮಾಡುತ್ತಿದೆ. ಆದರೆ ಇದರ ಸದುಪಯೋಗವಾಗುತ್ತಿಲ್ಲ. ಘನತಾಜ್ಯ ವಿಲೇವಾರಿ ವಿಷಯದಲ್ಲಿ ಪುರಸಭೆ ಸರಿಯಾಗಿ ಕಾರ್ಯನಿರ್ವಸುತ್ತಿಲ್ಲ. ಪ್ರತಿ ಸಲ ನೀರಿನ ಕರ ಸಂಗ್ರಹಿಸುತ್ತಿದ್ದರೂ ತಿಂಗಳಿಗೊಮ್ಮೆ ನೀರು ಬಿಡುವದು ತಪ್ಪುತ್ತಿಲ್ಲ ಎಂದು ಆರೋಪಿಸಿದರು.
ಮನವಿ ಸ್ವೀಕರಿಸಿದ ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ, ಕರ ದರ ಏರಿಕೆ ಸರಕಾರದ ಆದೇಶದಂತೆ ಮಾಡಲಾಗಿದೆ. ಮನವಿಯಲ್ಲಿ ನೀಡಲಾಗಿರುವ ಸಮಸ್ಯೆಗಳ ಕುರಿತು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವದಾಗಿ ಹೇಳಿದರು.
ಈ ಸಂದರ್ಭದಲ್ಲಿ ಕಾರ್ತಿಕ ಹಿರೇಮಠ, ಅಂಬರೀಷ ಗಾಂಜಿ, ಪ್ರವೀಣ ದಶಮನಿ, ಇಶಾಕ ಬಿಜಾಪುರ, ವಾಸು ಗೋಸಾವಿ, ಈಶ್ವರಗೌಡ ಪಾಟೀಲ್, ಶಿದಪ್ಪ ಕರಿಗೆರ, ಪ್ರಶಾಂತ ಕರಮಣ್ಣವರ, ಅರ್ಜುನ ಬಾಂಡಗೆ, ಚಂದ್ರು ಮುಳಗುಂದ, ಬಸನಗೌಡ ಮನ್ನಂಗಿ ಮುಂತಾದವರಿದ್ದರು.