ಬಾಗಲಕೋಟೆ: ರಾಜ್ಯದಲ್ಲಿ ಹೃದಯಾಘಾತದಿಂದ ಪ್ರಾಣ ಕಳೆದುಕೊಳ್ಳುತ್ತಿರುವ ಸರಣಿ ಪ್ರಕರಣಗಳು ಮುಂದುವರಿದಿವೆ. ಇದರ ನಡುವೆ ಅಚ್ಚರಿ ವಿಷಯವೊಂದು ಬೆಳಕಿಗೆ ಬಂದಿದೆ. ಈ ಒಂದು ಕುಟುಂಬಕ್ಕೆ ಹೃದಯಾಘಾತ ಶಾಪವಾಗಿ ಪರಿಣಮಿಸಿದ್ದು, ಕಳೆದ 15 ವರ್ಷಗಳಲ್ಲಿ ಹೃದಯಾಘಾತದಿಂದ 7 ಮಂದಿ ಬಲಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಹೌದು ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಚೌಡಾಪುರ ತೋಟ ವಸತಿ ಪ್ರದೇಶದಲ್ಲಿ ವಾಸವಾಗಿರುವ ಯಲ್ಲಪ್ಪ ಯಮನವ್ವ ದಂಪತಿಯ ಕುಟುಂಬದಲ್ಲಿ ಕಳೆದ 15 ವರ್ಷದಲ್ಲಿ ಹೃದಯಾಘಾತದಿಂದ 7 ಮಂದಿ ಮೃತಪಟ್ಟಿದ್ದಾರೆ. ಯಲ್ಲಪ್ಪ ಮತ್ತು ಯಮನವ್ವ ದಂಪತಿಗೆ ದುರಗಪ್ಪ, ಸಂತಪ್ಪ, ರಾಮಪ್ಪ, ರಾಮಣ್ಣ, ಸಂತವ್ವ, ನೀಲವ್ವ, ಹನುಮವ್ವ ಎಂಬ ಏಳು ಮಕ್ಕಳಿದ್ದರು.
ಯಮನವ್ವ ತಾನು ಮಲಗಿದ್ದ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇದಾದ ನಂತರ, ಆಕೆಯ ಮಕ್ಕಳಾದ ಸಂತಪ್ಪ, ರಾಮಪ್ಪ, ರಾಮಣ್ಣ, ಸಂತವ್ವ, ಸಂತಪ್ಪನ ಮಗಳು ಪಾರವ್ವ, ಸಂತವ್ವನ ಮಗ ಕಾಶಪ್ಪ ಒಬ್ಬೊಬ್ಬರಾಗಿ ಹೃದಯಾಘಾತದಿಂದ ಕೊನೆಯುಸಿರೆಳೆದರು. ಇನ್ನೂ 7 ಜನ ಈಗಾಗಲೇ ಹೃದಯಾಘಾತಕ್ಕೆ ಬಲಿಯಾಗಿದ್ದು, ಕುಟುಂಬದ ಇತರ ನಾಲ್ವರು ಸದಸ್ಯರಾದ ನೀಲವ್ವ,
ಆಕೆಯ ಹಿರಿಮಗ ಈರಣ್ಣ, ದುರಗಪ್ಪನ ಮೊಮ್ಮಗ ಯಲ್ಲಪ್ಪ, ಮತ್ತು ಹನುಮವ್ವನ ಮೊಮ್ಮಗ ಸಂಗಮೇಶ್ ಬೈಪಾಸ್ ಸರ್ಜರಿ ಮಾಡಿಸಿಕೊಂಡು ತಪಾಸಣೆ, ಚಿಕಿತ್ಸೆ, ಔಷಧಿಯಿಂದ ದಿನದೂಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ಒಂದೇ ಕುಟುಂಬದಲ್ಲಿ ಇಷ್ಟೊಂದು ಜನರಿಗೆ ಹೃದಯಾಘಾತದಿಂದ ಸಾವು ಮತ್ತು ಗಂಭೀರ ಆರೋಗ್ಯ ಸಮಸ್ಯೆಯು ಸ್ಥಳೀಯ ಜನರಲ್ಲಿ ಆತಂಕ ಮಾಡಿದೆ.