ಕೋಲಾರ:- ಪ್ರೀತಿ ಮಾಡಿದ ಯುವತಿಯನ್ನು ಸಬ್ ರಿಜಿಸ್ಟರ್ ಕಚೇರಿಯಲ್ಲಿ ಮದುವೆಯಾಗಿದ್ದ ಯುವಕ ಅಂದಿನ ರಾತ್ರಿಯೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಲಾರದಲ್ಲಿ ಜರುಗಿದೆ.
ಹರೀಶ್ ಬಾಬು (33) ನೇಣಿಗೆ ಶರಣಾದ ಯುವಕ. ಈತ ಕಳೆದ 8 ವರ್ಷಗಳಿಂದ ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಡೇಟಾ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದರು. ಕಳೆದ ಮೂರು ದಿನಗಳಿಂದ ರಜೆಯಲ್ಲಿದ್ದ ಹರೀಶ್ ಬಾಬು, ಬುಧವಾರ ಬೆಳಿಗ್ಗೆ ರಿಜಿಸ್ಟಾರ್ ಮ್ಯಾರೇಜ್ ಆಗಿದ್ದರು. ಆದರೆ ಅದೇ ದಿನ ರಾತ್ರಿ 11:30ರ ಸುಮಾರಿಗೆ ಆಸ್ಪತ್ರೆಯ ಇಎನ್‌ಟಿ ವಿಭಾಗದ ಕೊಠಡಿಯ ಕಿಟಕಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೀಗಾಗಿ ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.
ಈ ಕುರಿತು ಮೃತ ಹರೀಶ್ ಬಾಬು ತಾಯಿ ಮಾತನಾಡಿ, ಒಂದು ತಿಂಗಳ ಹಿಂದೆ ಯುವತಿಯೊಬ್ಬಳು ನಮ್ಮ ಮನೆಗೆ ಬಂದು ನಾನು ಹಾಗೂ ಹರೀಶ್ ಮದುವೆಯಾಗುತ್ತೇವೆ ಎಂದಳು. ಅದಕ್ಕೆ ಕೆಲ ದಿನಗಳ ನಂತರ ನಾನೇ ಮಾಡುತ್ತೇನೆ ಎಂದು ಹೇಳಿದ್ದೆ. ಆದರೆ ಬುಧವಾರ ಬೆಳಿಗ್ಗೆ ಯುವತಿ ಕಡೆಯವರು ಬಂದು ನನ್ನ ಮಗನನ್ನು ಬಲವಂತವಾಗಿ ಎಳೆದುಕೊಂಡು ಹೋಗಿ ಮದುವೆ ಮಾಡಿಸಿದ್ದಾರೆ ಎಂದು ತಿಳಿಸಿದರು.
ಮೃತ ಹರೀಶ್ ಬುಧವಾರ ರಾತ್ರಿ 11:15ರ ಸುಮಾರಿಗೆ ಆಸ್ಪತ್ರೆಯೊಳಗೆ ಹೋಗಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಮದ್ಯ ಸೇವನೆ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಸದ್ಯ ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.