ವಿಜಯಸಾಕ್ಷಿ ಸುದ್ದಿ, ರೋಣ: ಮೊಹರಂ ಹಬ್ಬದಲ್ಲಿ ಮಹತ್ವದ ದಿನಗಳೆಂದು ಪರಿಗಣಿಸುವ ಸಂದಲ್ ರಾತ್ರಿ, ಕತ್ತಲ್ ರಾತ್ರಿ ಹಾಗೂ ದೇವರು ಹೊಳೆಗೆ ಹೋಗುವ ದಿನಗಳಂದು ಮಾರನಬಸರಿ ಗ್ರಾಮಕ್ಕೆ ಸಾವಿರಾರು ಭಕ್ತರು ಆಗಮಿಸಿ ಅಲೈದೇವರುಗಳ ದರ್ಶನ ಪಡೆಯುತ್ತಾರೆ.
ಗದಗ ಜಿಲ್ಲೆಯಲ್ಲಿ ಅತ್ಯಂತ ಸಂಭ್ರಮ ಮತ್ತು ಭಕ್ತಿಯಿಂದ ನಡೆಯುವ ಹಬ್ಬ ಮಾರನಬಸರಿ ಗ್ರಾಮದ ಮೊಹರಂ ಆಗಿದೆ. ಧರ್ಮ-ಜಾತಿಗಳ ಜಂಜಾಟಗಳಿಲ್ಲದೆ ಎಲ್ಲರೂ ಸೇರಿ ಆಚರಿಸುವ ಹಬ್ಬ ಇದಾಗಿದ್ದು, ಗ್ರಾಮದ ಮೊಹರಂ ಹಬ್ಬವನ್ನು ವೀಕ್ಷಿಸಲು ಜಿಲ್ಲೆಯ ಅನೇಕ ಗ್ರಾಮಗಳಿಂದ ಸಾವಿರಾರು ಭಕ್ತರು ಗ್ರಾಮಕ್ಕೆ ಆಗಮಿಸುತ್ತಾರೆ. ಹಬ್ಬದ ನಿಮಿತ್ತ ಗ್ರಾಮ ಬಗೆ ಬಗೆಯಲ್ಲಿ ಅಲಂಕೃತಗೊಂಡ ಝಗಮಗಿಸುವ ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದೆ.
ಜುಲೈ 4ರಂದು ಸಂಧಲ್ ರಾತ್ರಿಯಿದ್ದು, ಈ ದಿನದಂದು ದೊಡ್ಡ ಮಸೂತಿಯ ದೊಡ್ಡ ದೇವರ ಸವಾರಿ ಮಧ್ಯರಾತ್ರಿ ಹೊರಡುತ್ತದೆ. ದೊಡ್ಡ ದೇವರ ಸವಾರಿ ವೀಕ್ಷಿಸಲು ಸಾವಿರಾರು ಭಕ್ತರು ನೆರೆಯುತ್ತಾರೆ. ಜುಲೈ 5ರಂದು ಕತ್ತಲ್ ರಾತ್ರಿ ದಿನದಂದು ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಸೇರುತ್ತಾರೆ. ಎರಡು ಮಸೂತಿಗಳ ಎಲ್ಲ ದೇವರುಗಳ ಸವಾರಿ ನಡೆಯುತ್ತದೆ. ಜುಲೈ 6ರಂದು ಅಲೈ ದೇವರುಗಳು ಹೊಳೆಗೆ ಹೊಗುವ ದಿನವಾಗಿದ್ದು, ಮದ್ಯಾಹ್ನ 3 ಗಂಟೆಯ ಸುಮಾರಿಗೆ ದೇವರುಗಳ ಸವಾರಿ ನಡೆಯುತ್ತದೆ.