ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ: ನಗರಸಭೆಯಾಗಬೇಕೆಂಬ ಬಹುದಿನಗಳ ಕನಸು ನನಸಾಗಿದ್ದು, ಇದಕ್ಕೆ ಶ್ರಮಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ ಸಂತಸ ವ್ಯಕ್ತಪಡಿಸಿದರು.
ಹರಪನಹಳ್ಳಿ ಪಟ್ಟಣದ ಪುರಸಭೆ ಮುಂಭಾಗದಲ್ಲಿ ಬುಧವಾರ ಸಂಜೆ ಪುರಸಭೆಯಿಂದ ನಗರಸಭೆಯಾಗಿ ಮುಂಬಡ್ತಿ ಪಡೆದಿದ್ದಕ್ಕಾಗಿ ಹಮ್ಮಿಕೊಂಡಿದ್ದ ಸಂಭ್ರಮಾಚರಣೆಯಲ್ಲಿ ಅವರು ಮಾತನಾಡಿದರು.
ಯಾವುದೇ ಕೆಲಸ-ಕಾರ್ಯಗಳು ಸಿದ್ಧಿಯಾಗಲು ನಿರಂತರ ಪರಿಶ್ರಮ ಬೇಕು. ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಹಾಗೂ ದಾವಣಗೆರೆ ಸಂಸದರ ಇಚ್ಛಾಶಕ್ತಿಯಿಂದ ಸರ್ಕಾರದ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರ ಪರಿಣಾಮ ಇಂದು ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳು ಇದರ ವ್ಯಾಪ್ತಿಗೆ ಒಳಪಡಬಹುದಾಗಿದೆ ಎಂದರು.
ಪುರಸಭೆ ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ್ ಮಾತನಾಡಿ, ಹರಪನಹಳ್ಳಿ ಪುರಸಭೆಯ ಸರಹದ್ದನ್ನೇ ನಗರಸಭೆಯನ್ನಾಗಿ ಮುಂಬಡ್ತಿ ಹೊಂದಿಸಲಾಗಿದ್ದು, ನಗರಸಭೆಯ ವ್ಯಾಪ್ತಿಗೆ ಬರಲು ಇಚ್ಛಿಸುವ ಗ್ರಾಮಗಳು ಕೂಡ ನಗರಸಭೆಗೆ ಸಿಗುವ ಮೂಲಭೂತ ಸೌಕರ್ಯಗಳನ್ನು ಪಡೆಯಬಹುದಾಗಿದೆ ಎಂದರು.
ನಗರದ ಆಸ್ತಿ ತೆರಿಗೆ, ಖಾತಾ ವರ್ಗಾವಣೆ ಶುಲ್ಕ, ನೀರಿನ ತೆರಿಗೆ, ಘನತ್ಯಾಜ್ಯ ವಸ್ತು ನಿರ್ವಹಣೆ ಶುಲ್ಕಗಳು ಹೆಚ್ಚಳವಾಗಲಿದೆ. ಇದರಿಂದ ನಗರದ ಅಭಿವೃದ್ಧಿಗೆ ಹಣ ಉತ್ತಮವಾಗಿ ಕ್ರೋಢೀಕರಣಗೊಳ್ಳಲಿದೆ ಎಂದರು.
ಪುರಸಭೆ ಅಧ್ಯಕ್ಷೆ ಫಾತೀಮಾಭಿ, ಉಪಾಧ್ಯಕ್ಷ ಕೊಟ್ರೇಶ್, ಪುರಸಭೆ ಮಾಜಿ ಅಧ್ಯಕ್ಷ ಹರಾಳು ಅಶೋಕ್, ಪುರಸಭೆ ಸದಸ್ಯರಾದ ಇಜಂತ್ಕರ್ ಮಂಜುನಾಥ, ಕಿರಣ್ ಶಾನಭಾಗ, ಜಾವೇದ್, ಜಾಕೀರ್, ರೊಕ್ಕಪ್ಪ, ಸುಮಾ ಜಗದೀಶ್, ನಾಮನಿರ್ದೇಶನ ಸದಸ್ಯರು ವಸಂತಪ್ಪ, ಗುಡಿ ನಾಗರಾಜ, ಸುಮಾ ಜಗದೀಶ್, ಮುಖಂಡರಾದ ಹುಲಿಕಟ್ಟಿ ಚಂದ್ರಪ್ಪ, ಮೈದೂರು ರಾಮಣ್ಣ, ಬಸವರಾಜ್ ಸಂಗಪ್ಪನವರ, ಇಸ್ಮಾಯಿಲ್ ಎಲಿಗಾರ, ಡಂಕಿ ವಾಸೀಮ್, ಶಶಿಕುಮಾರ್ ನಾಯ್ಕ, ಎನ್. ಶಂಕರ್, ಓ. ಮಹಾಂತೇಶ್, ವಾಗೀಶ್ ಮುಂತಾದವರಿದ್ದರು.