ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಕಣ್ಮರೆಯಾಗಿ ಹೋಗುವ ವಚನ ಸಾಹಿತ್ಯಕ್ಕೆ ಮರುಜೀವನ ಕೊಟ್ಟು ಕನ್ನಡ ಸಾಹಿತ್ಯದ ಅಮೂಲ್ಯ ಆಸ್ತಿಯನ್ನು ಉಳಿಸಿದ ಮಹಾನ್ ಪುರುಷ ಫ.ಗು. ಹಳಕಟ್ಟಿ ಎಂದರೆ ತಪ್ಪಾಗಲಾರದು ಎಂದು ಶಿಕ್ಷಕ ಜೆ.ಎಸ್. ರಾಮಶೆಟ್ಟರ ಹೇಳಿದರು.
ಬುಧವಾರ ಸಮೀಪದ ಶಿಗ್ಲಿ ಗ್ರಾಮದ ಗ್ರಾಮಾಂತರ ಶಿಕ್ಷಣ ಸಂಸ್ಥೆಯಲ್ಲಿ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಲಾ ವೇದಿಕೆ ಇವುಗಳ ಆಶ್ರಯದಲ್ಲಿ ವಚನ ಪಿತಾಮಹ ಫ.ಗು. ಹಳಕಟ್ಟಿ ಅವರ ಜನ್ಮ ದಿನಾಚರಣೆ ಅಂಗವಾಗಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
12ನೇ ಶತಮಾನದಲ್ಲಿ ಬಸವಾದಿ ಶರಣರು ಸಾವಿರಾರು ವಚನಗಳನ್ನು ರಚನೆ ಮಾಡಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದರು. ಕನ್ನಡ ಸಾಹಿತ್ಯದ ಅಮೂಲ್ಯ ರತ್ನಗಳಂತಿದ್ದ ವಚನ ಸಾಹಿತ್ಯವು ಶರಣರ ಕಾಲಾನಂತರದಲ್ಲಿ ಅಲ್ಲಲ್ಲಿ ಕಣ್ಮರೆಯಾಗಿ ಹೋಗುತ್ತಿದ್ದವು. ಓಲೆ ಗರಿಯಲ್ಲಿದ್ದ ವಚನ ಸಾಹಿತ್ಯವನ್ನು ರಕ್ಷಣೆ ಮಾಡಿ ಅವುಗಳಿಗೆ ಜೀವ ತುಂಬಿ ಕನ್ನಡ ಸಾಹಿತ್ಯಕ್ಕೆ ಅಮೋಘ ಕಾಣಿಕೆ ನೀಡಿದ್ದು ಫ.ಗು. ಹಳಕಟ್ಟಿಯವರು. ಹಳಕಟ್ಟಿಯವರು ವಚನ ಸಾಹಿತ್ಯದ ರಕ್ಷಣೆ ಹಾಗೂ ಅವುಗಳ ಪ್ರಸಾರಕ್ಕೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟವರು ಎಂದರು.
ಸಮಾರಂಭ ಉದ್ಘಾಟಿಸಿದ ಬಸಣ್ಣ ಬೆಂಡಿಗೇರಿ ಮಾತನಾಡಿ, ಶರಣರ ವಚನಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ. 12ನೇ ಶತಮಾನದಲ್ಲಿ ರಚಿಸಿದ ವಚನಗಳು ಸಮಾಜದ ಅಂಕು-ಡೊಂಕು ತಿದ್ದುವ ಸಾಹಿತ್ಯವಾಗಿದೆ. ಇಂತಹ ಶರಣರ ವಚನಗಳನ್ನು ಸಂರಕ್ಷಣೆ ಮಾಡಿದ ಕೀರ್ತಿ ಫ.ಗು. ಹಳಕಟ್ಟಿ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.
ಈ ವೇಳೆ ರಂಜನ ಪಾಟೀಲ, ಸೋಮಣ್ಣ ಡಾಣಗಲ್ಲ, ರಾಜರತ್ನ ಹುಲಗೂರ, ನಿರ್ಮಲಾ ಅರಳಿ, ಎಲ್.ಎಸ್. ಅರಳಹಳ್ಳಿ ಇದ್ದರು. ಮಾಲಾದೇವಿ ದಂದರಗಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಎಂ.ಕೆ. ಕಳ್ಳಿಮಠ ವಂದಿಸಿದರು.