ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಗದಗ ಜಿಲ್ಲಾ ಘಟಕದಲ್ಲಿ ಡಾ. ರವಿ ಗುಂಜೀಕರ್ ಅವರ ಸೇವಾ ನಿವೃತ್ತಿಯಿಂದ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಡಾ. ಬಸವರಾಜ ಬಳ್ಳಾರಿ ಅಭೂತಪೂರ್ವ ಗೆಲುವು ಸಾಧಿಸಿದ್ದಾರೆ.
ಈ ಹಿಂದೆ ಡಾ. ಬಸವರಾಜ ಬಳ್ಳಾರಿ ಅವರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಪೂರ್ಣಾವಧಿಗೂ ಬಸವರಾಜ ಬಳ್ಳಾರಿ ಅವರನ್ನು ಅಧ್ಯಕ್ಷರನ್ನಾಗಿ ಘೋಷಣೆ ಮಾಡಲು ಕೆಲವರು ವಿರೋಧ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಗುರುವಾರ ಚುನಾವಣೆ ನಿಗದಿಯಾಗಿತ್ತು. ಅಧಿಸೂಚನೆಯಂತೆ ನೌಕರರ ಭವನದಲ್ಲಿ ಗುರುವಾರ ಚುನಾವಣೆ ಪ್ರಕ್ರಿಯೆಗಳು ಪ್ರಾರಂಭವಾದವು. ಡಾ. ಬಸವರಾಜ ಬಳ್ಳಾರಿ ಹಾಗೂ ಮುಂಡರಗಿ ತಾಲೂಕು ಘಟಕದ ಅಧ್ಯಕ್ಷ ನಾಗರಾಜ ಹಳ್ಳಿಕೇರಿ ನಾಮಪತ್ರ ಸಲ್ಲಿಸಿದರು. ಮತದಾನ ಹಕ್ಕು ಹೊಂದಿದ್ದ 69 ಜನ ಸದಸ್ಯರ ಪೈಕಿ 68 ಜನ ಮತ ಚಲಾಯಿಸಿದರು. ಆ ಪೈಕಿ 55 ಮತಗಳನ್ನು ಪಡೆದು ಬಸವರಾಜ ಬಳ್ಳಾರಿ ಅಧ್ಯಕ್ಷರಾಗಿ ಆಯ್ಕೆಯಾದರೆ, 13 ಮತಗಳನ್ನು ಪಡೆದ ನಾಗರಾಜ ಹಳ್ಳಿಕೇರಿ ಪರಾಭವಗೊಂಡರು. ಈ ಕುರಿತು ಚುನಾವಣಾಧಿಕಾರಿ ಸಿ. ಬಸವರಾಜ ಅಧಿಕೃತವಾಗಿ ಘೋಷಣೆ ಮಾಡಿ, ಬಸವರಾಜ ಬಳ್ಳಾರಿ ಅವರಿಗೆ ಪ್ರಮಾಣಪತ್ರ ವಿತರಣೆ ಮಾಡಿದರು.
ಸೇವಾ ನಿವೃತ್ತಿ ಹೊಂದಿರುವ ಡಾ. ರವಿ ಗುಂಜೀಕರ್ ಮೂರು ಅವಧಿಗೂ ಅವಿರೋಧವಾಗಿ ಸರಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಇದೇ ಮೊದಲ ಬಾರಿಗೆ ಅಧ್ಯಕ್ಷರ ಹುದ್ದೆಗೆ ಚುನಾವಣೆ ನಿಗದಿಯಾಗಿದ್ದರಿಂದ ಭಾರೀ ಕುತೂಹಲ ಮೂಡಿಸಿತ್ತು. ಬಸವರಾಜ ಬಳ್ಳಾರಿ ಆಯ್ಕೆ ಘೋಷಣೆಯಾಗುತ್ತಿದ್ದಂತೆ ಡಾ. ರವಿ ಗುಂಜೀಕರ್ ಹಾಗೂ ಅವರ ಅಪಾರ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ವಿತರಿಸಿ, ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದರು. ನೌಕರರ ಭವನದ ಮುಂದಿನ ಪಂ. ಪುಟ್ಟರಾಜರ ದೇವಸ್ಥಾನದ ಆವರಣದಲ್ಲಿ ವಿಜಯೋತ್ಸವ ಆಚರಿಸಿದರು.
ಈ ಅಭೂತಪೂರ್ವ ಗೆಲುವಿಗೆ ಜಿಲ್ಲೆಯ ಎಲ್ಲ ಸರಕಾರಿ ನೌಕರರು ಮತ್ತು ನೌಕರರ ಸಂಘದ ಪದಾಧಿಕಾರಿಗಳು ಕಾರಣರಾಗಿದ್ದಾರೆ. ಜಿಲ್ಲಾಧ್ಯಕ್ಷ ಸ್ಥಾನದ ಈ ಜವಾಬ್ದಾರಿಯನ್ನು ಸಮರ್ಥವಾಗಿ ಬಳಸಿಕೊಂಡು, ಎಲ್ಲರನ್ನೂ ಒಗ್ಗೂಡಿಸಿಕೊಂಡು ಸರಕಾರಿ ನೌಕರರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುವೆ.
– ಡಾ. ಬಸವರಾಜ ಬಳ್ಳಾರಿ.
ನೌಕರರ ಸಂಘದ ನೂತನ ಜಿಲ್ಲಾಧ್ಯಕ್ಷರು.