ವಿಜಯಸಾಕ್ಷಿ ಸುದ್ದಿ, ಗದಗ: ಶಿಕ್ಷಣ ಪ್ರೇಮಿ, ತ್ಯಾಗಜೀವಿ ಬಿ.ಜಿ. ಅಣ್ಣಿಗೇರಿ ಗುರುಗಳು ಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆ ಅಮೋಘವಾದದ್ದು. ಗುರುಕುಲ ಮಾದರಿಯ ಆಶ್ರಮದಲ್ಲಿ ಇಂದಿಗೂ ನಿತ್ಯ ಅನುಭವಿಕ ಶಿಕ್ಷಕ ತಂಡದಿಂದ ‘ಅಕ್ಷರ ದಾಸೋಹ’ ನಡೆದಿರುವದು ಅಭಿನಂದನೀಯ ಎಂದು ಗದುಗಿನ ಹಿರಿಯ ತೆರಿಗೆ ಸಲಹೆಗಾರರಾದ ಮುಕುಂದ ಪೋತ್ನೀಸ್ ಹೇಳಿದರು.
ಅವರು ಗುರುವಾರ ಗದಗ ತಾಲೂಕಿನ ಅಂತೂರಬೆಂತೂರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶ್ರೀ ಬಿ.ಜಿ. ಅಣ್ಣಿಗೇರಿ ಗುರುಗಳ ಪ್ರತಿಭಾ ಪ್ರತಿಷ್ಠಾನದಿಂದ ಎಸ್.ಎಸ್.ಎಲ್.ಸಿಯಲ್ಲಿ ಮೊದಲ 5 ಸ್ಥಾನಗಳನ್ನು ಪಡೆದುಕೊಂಡ ಗದಗ ತಾಲೂಕಿನ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಮಾತನಾಡಿದರು.
ಶಿಕ್ಷಕರಾಗಿ, ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸುತ್ತಿದ್ದ ಅಣ್ಣಿಗೇರಿ ಗುರುಗಳು ಗದುಗಿನಲ್ಲಿ ತಾವಿದ್ದ ಕೊಠಡಿಯಲ್ಲಿ ಕೆಲವು ವಿದ್ಯಾರ್ಥಿಗಳಿಗೆ ಟ್ಯೂಶನ್ ಹೇಳುವ ಪರಿಪಾಠವಿಟ್ಟುಕೊಂಡವರು. ಈ ಟ್ಯೂಶನ್ ಹೇಳುವ ಸುದ್ದಿ ಇತರ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿ ಕಾಲಕ್ರಮೇಣ ಅದು ಗುರುಕುಲ ಮಾದರಿಯಲ್ಲಿ ಬೆಳೆದು ಬಂತು. ಅವರ ತರುವಾಯ ಅವರ ಶಿಷ್ಯರು ಈ ಗುರುಕುಲವನ್ನು ಪ್ರಗತಿಪಥದಲ್ಲಿ ಮುನ್ನಡೆಸಿಕೊಂಡು ಬಂದಿರುವದು ಶ್ಲಾಘನೀಯ ಎಂದರು.
ಪ್ರತಿಷ್ಠಾನದ ಅಧ್ಯಕ್ಷ ಶಿವಕುಮಾರ ಎಚ್.ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಕ್ಷತೆಯನ್ನು ಆರ್.ಡಿ. ಜೋಶಿ ವಹಿಸಿದ್ದರು. ವೇದಿಕೆಯ ಮೇಲೆ ಪ್ರತಿಷ್ಠಾನದ ಕಾರ್ಯದರ್ಶಿ ಸುಭಾಸಚಂದ್ರ ಬೆಟ್ಟದೂರ, ಶಿವಾನಂದ ಕತ್ತಿ, ಸಹಾಯಕರಾದ ನೇಹಾ, ಸುಧಾರಾಣಿ, ಗ್ರಾಮದ ಗಣ್ಯರಾದ ನಿಂಗಪ್ಪ ಮ್ಯಾಗೇರಿ ಉಪಸ್ಥಿತರಿದ್ದರು.
ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಈಶ್ವರಿ ದೊಡ್ಡಗೌಡ್ರ, ಸಂಜನಾ ಗಾಣಿಗೇರ, ಸಾಕ್ಷೀ ಜನಗೊಣ್ಣವರ, ದೀಪಾ ಯಂಗಾಡಿ, ಯಶೋದಾ ಬಾವಿಕಟ್ಟಿ ಅವರುಗಳಿಗೆ ನಗದು ಪುರಸ್ಕಾರದ ಚೆಕ್, ಪ್ರಮಾಣಪತ್ರ ನೀಡಲಾಯಿತು. ಶಿಕ್ಷಕ ಪಿ.ಸಿ. ಸೊಲಬಣ್ಣವರ ಸ್ವಾಗತಿಸಿ ವಂದಿಸಿದರು.
ಹುಲಕೋಟಿಯಲ್ಲಿ: ಹುಲಕೋಟಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಲಕ್ಷ್ಮೀ ಹಿರೇಮಠ, ಅಪೂರ್ವ ಲಕ್ಷ್ಮೇಶ್ವರ, ಪವಿತ್ರಾ ಅಕ್ಕಿ, ಸಪ್ನಾ ಕಲಾಲ, ಮಧು ಬಳ್ಳಾರಿ ಅವರುಗಳಿಗೆ ಅವರುಗಳಿಗೆ ನಗದು ಪುರಸ್ಕಾರದ ಚೆಕ್, ಪ್ರಮಾಣಪತ್ರ ನೀಡಿ ಗೌರವಿಸಲಾಯಿತು.
ಅಧ್ಯಕ್ಷತೆಯನ್ನು ಎಸ್.ಎ. ಖಾನ್ ವಹಿಸಿದ್ದರು. ಯೋಗೇಶ್‌ಕುಮಾರ ಸ್ವಾಗತಿಸಿದರು, ಪಿ.ಪಿ. ಟಿಕಾರೆ ನಿರೂಪಿಸಿದರು. ಕೊನೆಗೆ ಎಸ್.ಎಚ್. ಮುಲ್ಲಾ ವಂದಿಸಿದರು. ಪ್ರತಿಷ್ಠಾನದ ಕಾರ್ಯದರ್ಶಿ ಸುಭಾಸಚಂದ್ರ ಬೆಟ್ಟದೂರ, ಶಿವಾನಂದ ಕತ್ತಿ, ಸಿದ್ದು ಕವಲೂರ, ತೋಂಟೇಶ ವೀರಲಿಂಗಯ್ಯನಮಠ, ಭಾರತಿ ಪಾಟೀಲ ನೇಹಾ, ಸುಧಾರಾಣಿ, ಅನ್ನಪೂರ್ಣ ಹಿತ್ತಲಮನಿ ಮುಂತಾದವರಿದ್ದರು.
ಇಂದಿನ ಕಾರ್ಯಕ್ರಮ
ಜುಲೈ 4ರಂದು ಮುಂಜಾನೆ 10.30 ಗಂಟೆಗೆ ಗದಗ ತಾಲೂಕಿನ ಸೊರಟೂರ ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್, ಮಧ್ಯಾಹ್ನ 12 ಗಂಟೆಗೆ ಯಲಿಶಿರೂರ ಗ್ರಾಮದ ಸರ್ಕಾರಿ ಹೆಣ್ಣು ಮಕ್ಕಳ ಪ್ರೌಢಶಾಲೆ, ಮಧ್ಯಾಹ್ನ 1.30 ಗಂಟೆಗೆ ಶಿರುಂಜ ಗ್ರಾಮದ ಸರ್ಕಾರಿ ಹೆಣ್ಣುಮಕ್ಕಳ ಪ್ರೌಢಶಾಲೆಯಲ್ಲಿ ಪ್ರತಿಭಾ ಪುರಸ್ಕಾರವಿದೆ.
ನಾಳೆಯ ಕಾರ್ಯಕ್ರಮ
ಜುಲೈ 5ರಂದು ಮುಂಜಾನೆ 10.30 ಗಂಟೆಗೆ ಗದಗ ತಾಲೂಕಿನ ಹರ್ಲಾಪೂರ ಗ್ರಾಮದ ಸರ್ಕಾರಿ ಪ್ರೌಢಶಾಲೆ, ಮಧ್ಯಾಹ್ನ 12 ಗಂಟೆಗೆ ಹಾತಲಗೇರಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವದು ಎಂದು ಪ್ರತಿಷ್ಠಾನದ ಅಧ್ಯಕ್ಷ ಶಿವಕುಮಾರ ಎಚ್.ಪಾಟೀಲ ತಿಳಿಸಿದ್ದಾರೆ.