ಹಾವೇರಿ:- ಇಲ್ಲಿನ ಗಂಗೀಭಾವಿ ಕ್ರಾಸ್ ಬಳಿ ಜೂ. 24ರಂದು ನಡೆದಿದ್ದ ಪ್ರಥಮ ದರ್ಜೆ ಗುತ್ತಿಗೆದಾರ ಶಿವಾನಂದ ಕುನ್ನೂರು (40) ಅವರ ಹತ್ಯೆ ಪ್ರಕರಣಕ್ಕೆ ಮತ್ತೊಂದು ಬಿಗ್ ಟ್ವಿಸ್ಟ್ ಸಿಕ್ಕಿದೆ.
ಹತ್ಯೆಗೆ ಪ್ರತೀಕಾರ ತೀರಿಸಲು ಹೋಗಿ ಪೊಲೀಸ್ ಪೇದೆ ಜೈಲು ಪಾಲಾಗಿದ್ದಾರೆ. ಪ್ರಕರಣದ A1 ಆರೋಪಿ ನಾಗರಾಜ್ ಮನೆಗೆ ಬೆಂಕಿಯಿಟ್ಟ ಆರೋಪ ಮೇಲೆ ಪೊಲೀಸ್ ಪೇದೆಯನ್ನು ಬಂಧಿಸಲಾಗಿದೆ.
ಕೊಲೆಯಾದ ಶಿವಾನಂದ ಅಣ್ಣ ಹಾಗೂ ಪೊಲೀಸ್ ಸಿಬ್ಬಂದಿ ಲಿಂಗರಾಜ ಕುನ್ನೂರನ್ನ ಶಿಗ್ಗಾವಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಮೂಲಕ ಕೊಲೆ ಪ್ರಕರಣ ಸಂಬಂಧ ಪೊಲೀಸ್ ಸಿಬ್ಬಂದಿ ಲಿಂಗರಾಜ ಸೇರಿದಂತೆ ಒಟ್ಟು ಒಂಬತ್ತು ಜನರನ್ನು ಬಂಧಿಸಿದಂತಾಗಿದೆ. ಲಿಂಗರಾಜ್ ಅವರು, ಸಶಸ್ತ್ರ ಮೀಸಲು ಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಹತ್ಯೆ ಬಳಿಕ ಆರೋಪಿ ಮನೆಗೆ ಬೆಂಕಿಯಿಡಲು ಲಿಂಗರಾಜ್ ಪ್ರಚೋದಿಸಿದ್ದರು. ಈ ಹಿನ್ನೆಲೆ ತಡರಾತ್ರಿ ಒಟ್ಟು 9 ಜನರನ್ನ ಶಿಗ್ಗಾವಿ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಲಿಂಗರಾಜ್ ಕುನ್ನೂರು, ನವೀನ್ ಹೊಸಮನಿ, ಧರ್ಮಪ್ಪ, ಪ್ರಕಾಶ್, ಬಂಧಿತರು. ಒಟ್ಟು 6 ಜನರಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಇನ್ನುಳಿದ 3 ಜನರಿಗೆ ಪೊಲೀಸ್ ಕಸ್ಟಡಿ ಪಡೆಯಲಾಗಿದೆ.
ಪ್ರಕರಣದ ಹಿನ್ನೆಲೆ: ಶಿಗ್ಗಾಂವಿ ಪಟ್ಟಣದ ಹೊರವಲಯದ ಗಂಗಿಭಾವಿ ಕ್ರಾಸ್ ಬಳಿ ಜೂನ್ 24ರ ಮಂಗಳವಾರ ಗುತ್ತಿಗೆದಾರ ಶಿವಾನಂದ ಅವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಕೊಲೆಯ ವಿಡಿಯೋ ವೈರಲ್ ಆಗಿತ್ತು. ಅದನ್ನು ಆಧರಿಸಿ ಶಿವಾನಂದ ಅವರ ಪತ್ನಿ ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ಐವರ ವಿರುದ್ಧ ದೂರು ದಾಖಲಿಸಿದ್ದರು.