ತಾಲೂಕಾ ಆಸ್ಪತ್ರೆಗಳಲ್ಲಿ ಉಚಿತ ಇಸಿಜಿ

0
Spread the love

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ರಾಜ್ಯದ ಯುವಸಮೂಹಕ್ಕೆ ಮಾದರಿಯಾಗಿದ್ದ ನಟ ಪುನೀತರಾಜಕುಮಾರ ಅವರ ಹೆಸರಿನಲ್ಲಿ ರಾಜ್ಯ ಸರಕಾರ ಜಾರಿಗೊಳಿಸಿರುವ ಡಾ. ಪುನೀತ್ ರಾಜ್‌ಕುಮಾರ ಹೃದಯ ಜ್ಯೋತಿ ಯೋಜನೆ ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ವರವಾಗುತ್ತಿದೆ.

Advertisement

ಜಿಲ್ಲೆಯ ಶಿರಹಟ್ಟಿ ಮತ್ತು ನರಗುಂದ ತಾಲೂಕಾ ಆಸ್ಪತ್ರೆಗಳಲ್ಲಿ ಹೃದಯ ಸಂಬಂಧಿ ಕಾಯಿಲೆಗಳಿಗೆ ಉಚಿತವಾಗಿ ಇಸಿಜಿ ಮಾಡುವ ವ್ಯವಸ್ಥೆ ಜಾರಿಯಲ್ಲಿದ್ದು, ಇಸಿಜಿ ಮಾಡಿದ ನಂತರ ಹೃದಯತಜ್ಞರ ಸಲಹೆ ಮೇರೆಗೆ ತುರ್ತಾಗಿ ಚಿಕಿತ್ಸೆ ಅವಶ್ಯವಿದ್ದವರಿಗೆ ಮೇಲ್ಮಟ್ಟದ ಆಸ್ಪತ್ರೆಗೆ ಕಳುಹಿಸಲಾಗುತ್ತಿದೆ. ಜಿಲ್ಲೆಯಲ್ಲಿ ಈ ಯೋಜನೆಯಡಿ 2024ರ ಮಾರ್ಚ್‌ ನಿಂದ ಜೂನ್-2025ರವರೆಗೆ ಒಟ್ಟು 6681 ಇಸಿಜಿ ಮಾಡಲಾಗಿದೆ. ಇದರಲ್ಲಿ 3491 ನಾರ್ಮಲ್ ಇದ್ದು, 48 ಹೃದಯ ಸಂಬಂಧಿ ಕಾಯಿಲೆ ಇದ್ದವರಿಗೆ ಹೆಚ್ಚಿನ ಚಿಕಿತ್ಸೆ ನೀಡಿ 35 ಜನರ ಜೀವವನ್ನು ಉಳಿಸಲಾಗಿದೆ. ಕಳೆದ 3 ತಿಂಗಳಲ್ಲಿ ಕಾರ್ಡಿಯಾಕ್‌ನಿಂದ 78 ಜನರು ಮೃತಪಟ್ಟಿದ್ದು, ಶಿರಹಟ್ಟಿ ತಾಲೂಕಿನಲ್ಲಿ 4 ಮತ್ತು ಲಕ್ಷ್ಮೇಶ್ವರ ತಾಲೂಕಿನಲ್ಲಿ 2 ಹೃದಯಾಘಾತದಿಂದ ಸಾವನ್ನಪಿರುವುದಾಗಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹೆಚ್ಚುತ್ತಿರುವ ಹೃದಯಾಘಾತಕ್ಕೆ ಮತ್ತು ಹೃದಯ ಸಂಬಂಧಿತ ಕಾಯಿಲೆಗಳಿಗೆ ಆಧುನಿಕ ಜೀವನಶೈಲಿಯೇ ಪ್ರಮುಖ ಕಾರಣವಾಗಿದೆ ಎಂದು ಹೃದಯತಜ್ಞರ ಅಭಿಪ್ರಾಯವಾಗಿದೆ. ಅಲ್ಲದೆ, ಪರಿಸರ ಮಾಲಿನ್ಯದಿಂದ ಕಲುಷಿತ ಆಹಾರ, ವಂಶವಾಹಿ, ಅತಿಯಾದ ಧೂಮಪಾನ-ಮದ್ಯಪಾನ ಸಹ ಹೃದಯಾಘಾತಕ್ಕೆ ಪ್ರಮುಖ ಕಾರಣವಾಗುತ್ತಿವೆ.

ಜಿಲ್ಲೆಯಲ್ಲಿಯ ಹೃದಯ ಸಂಬಂಧಿ ಕಾಯಲೆಗಳಿಂದ ಬಳಲುತ್ತಿರುವವರು ದೂರದ ಬೆಂಗಳೂರು-ಬೆಳಗಾಂವಗಳ ಪ್ರತಿಷ್ಠಿತ ಆಸ್ಪತ್ರೆಗಳಿಗೆ ತೆರಳಬೇಕಿತ್ತು. ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅವರ ಇಚ್ಛಾಶಕ್ತಿಯ ಪರಿಣಾಮ ಗದಗ ಕೆ.ಎಚ್. ಪಾಟೀಲ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಆರಂಭವಾಗಿರುವ ಕ್ಯಾಥ್‌ಲ್ಯಾಬ್ ಹೃದಯ ರೋಗದಿಂದ ಬಳಲುತ್ತಿರುವ ಬಡ ಜನತೆಯ ಪಾಲಿಗೆ ವರವಾಗಿದೆ.

ತಾಲೂಕಾ ಆರೋಗ್ಯಾಧಿಕಾರಿ ಡಾ. ಸುಭಾಸ ದೈಗೊಂಡ ಪ್ರತಿಕ್ರಿಯಿಸಿ, ಗ್ರಾಮೀಣ ಭಾಗದಲ್ಲಿ ಬಿಎಚ್‌ಓಗಳ ಮೂಲಕ ಹೃದಯ ಸಂಬಂಧಿತ ಕಾಯಿಲೆಗಳ ಕುರಿತು ಮುನ್ನೆಚ್ಚರಿಕೆ ವಹಿಸುವಂತೆ ಜಾಗೃತಿ ಮೂಡಿಸಲಾಗುತ್ತಿದೆ. ಆಧುನಿಕ ಆಹಾರ ಪದ್ಧತಿ, ಕೆಲಸದ ಒತ್ತಡ, ಧೂಮಪಾನ-ಮದ್ಯಪಾನದಿಂದ ದೂರವಿರಬೇಕು. ವರ್ಷಕ್ಕೆ 1 ಬಾರಿಯಾದರೂ ಹೃದಯ ಪರೀಕ್ಷೆ ಮಾಡಿಸಬೇಕೆಂದು ಹೇಳಿದರು.

ಈ ಕುರಿತು ಪ್ರತಿಕ್ರಿಯಿಸಿದ ಪ.ಪಂ ಸದಸ್ಯ ಮಂಜುನಾಥ ಘಂಟಿ, ಯುವಪೀಳಿಗೆ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಿಲ್ಲ. ಇದರಿಂದ ಅಲ್ಲಲ್ಲಿ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವುದು ಕೇಳಿ ಬರುತ್ತಿದ್ದು, ಜಂಕ್ ಫುಡ್ ಸೇವಿಸುವುದನ್ನು ಬಿಡಬೇಕು. ಹೃದಯ ಸಂಬಂಧಿ ಆರೋಗ್ಯದ ಕುರಿತು ಇಲಾಖೆಯು ಇನ್ನೂ ಹೆಚ್ಚಿನ ರೀತಿಯಲ್ಲಿ ಜನತೆಗೆ ಈ ಬಗ್ಗೆ ಜಾಗೃತಿ ಮೂಡಿಸಬೇಕೆಂದು ಹೇಳಿದರು.

ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾ ಆರೋಗ್ಯ ಇಲಾಖೆಯ ಸಮೀಕ್ಷಣಾಧಿಕಾರಿ ಹಾಗೂ ಸ್ಟೆಮಿ ಜಿಲ್ಲಾ ನೋಡಲ್ ಅಧಿಕಾರಿ ಡಾ. ವೆಂಕಟೇಶ ರಾಠೋಡ, ಜಿಲ್ಲೆಯ ಉಪ ಕೇಂದ್ರಗಳ ಮಟ್ಟದಲ್ಲಿ ರಕ್ತದೊತ್ತಡ ಮತ್ತು ಮಧುಮೇಹ, ಬಾಯಿ, ಸ್ತನ, ಸರ್ವಿಕಲ್ ಕ್ಯಾನ್ಸರ್‌ಗಳ ಕುರಿತು ಸ್ಕ್ರೀನಿಂಗ್ ಮಾಡಲಾಗುತ್ತಿದೆ. ಜಿಲ್ಲೆಯ ಶಿರಹಟ್ಟಿ-ನರಗುಂದ ತಾಲೂಕಾ ಆಸ್ಪತ್ರೆಗಳಲ್ಲಿ ಹೃದಯ ಜ್ಯೋತಿ ಕಾರ್ಯಕ್ರಮದಡಿ ಹೃದಯ ಸಂಬಂಧಿ ಕಾಯಿಲೆ ಇದ್ದವರಿಗೆ ತಪಾಸಣೆ ನಡೆಸಿ ಅಗತ್ಯವಿದ್ದವರಿಗೆ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ. ಸಾರ್ವಜನಿಕರು ಆಧುನಿಕ ಜೀವನಶೈಲಿಯಿಂದ ದೂರವಿದ್ದು, ಆರೋಗ್ಯವನ್ನು ಕಾಪಾಡಿಕೊಳ್ಳುವ ಅಗತ್ಯವಿದೆ ಎಂದರು.


Spread the love

LEAVE A REPLY

Please enter your comment!
Please enter your name here