ವಿಜಯಸಾಕ್ಷಿ ಸುದ್ದಿ, ಗದಗ
ನಿತ್ಯವೂ ಇಲ್ಲಿ ಜನಜಂಗುಳಿ. ಮಕ್ಕಳು, ಮಹಿಳೆಯರೇ ತುಂಬಿ ತುಳುಕುವ ಈ ಆಸ್ಪತ್ರೆಯಲ್ಲಿ ಯಾವುದೇ ಸೆಕ್ಯುರಿಟಿ ಇಲ್ಲ, ಸಿಸಿ ಕ್ಯಾಮೆರಾ ಇಲ್ಲದ ಕಾರಣ ಸರಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಕಳ್ಳತನ ಈಗ ಮಾಮೂಲಿ ಆಗಿದೆ. ವಾರದಲ್ಲಿ ಒಂದು ಪ್ರಕರಣವಾದರೂ ನಡೆಯುತ್ತೆ. ಆದರೆ ಪೊಲೀಸ್ ಠಾಣೆಯ ಮೆಟ್ಟಲು ಹತ್ತಲ್ಲ!
ಶನಿವಾರ ಮುಂಜಾನೆ 10ರ ಸುಮಾರಿಗೆ ಕರ್ತವ್ಯ ನಿರತ ವೈದ್ಯ, ಮಹಿಳಾ ಸಿಬ್ಬಂದಿಯ ಎರಡು ವ್ಯಾನಿಟಿ ಬ್ಯಾಗ್ಗಳು ಕಳ್ಳತನವಾಗಿವೆ. ಪುಣ್ಯಕ್ಕೆ ಆ ಚೀಲಗಳಲ್ಲಿ ಹಣವಿರಲಿಲ್ಲ. ಆದರೆ, ವೈದ್ಯರ ಬ್ಯಾಗಲ್ಲಿದ್ದ ದುಬೈಯಿಂದ ತಂದಿದ್ದ ಬೆಲೆಬಾಳುವ ಸ್ಯಾಮ್ಸಂಗ್ ಮೊಬೈಲ್ ಕಳ್ಳತನವಾಗಿದೆ.
ಮಹಿಳಾ ಸಿಬ್ಬಂದಿಯ ಬ್ಯಾಗ್ನಲ್ಲಿ ಎಟಿಎಮ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಇದ್ದವು. ಈ ಎರಡು ಬ್ಯಾಗ್ ಕಳ್ಳತನವಾಗಿ ಎರಡು ಗಂಟೆಗಳ ಕಾಲ ಮೊಬೈಲ್ ಆನ್ ಆಗಿಯೇ ಇತ್ತು. ಕಾಲ್ ಮಾಡಿದಾಗ ಕಳ್ಳ (ಕಳ್ಳಿ?) ರೀಸೀವ್ ಮಾಡಿದನಾದರೂ ಮಾತನಾಡಲಿಲ್ಲ. ಈ ಬಗ್ಗೆ ಬಡಾವಣೆ ಠಾಣೆಗೆ ಹೋದ ವೈದ್ಯರು ಹಾಗೂ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದು, ತನಿಖೆ ಮುಂದುವರೆದಿದೆ.
ಈ ಕಳ್ಳತನ ಪ್ರಕರಣ ಇದೇ ಮೊದಲಲ್ಲ. ಈ ಹಿಂದೆಯೂ ಈ ಆಸ್ಪತ್ರೆಯಲ್ಲಿ ಕಳ್ಳತನದ ಹಲವಾರು ಪ್ರಕರಣಗಳು ನಡೆದಿವೆ. ವಾರದ ಹಿಂದೆ ಒಪಿಡಿಯಲ್ಲಿ ಜನರ ಚೀಟಿ ಮಾಡಿದ ದುಡ್ಡು ಮಾಯವಾಗಿತ್ತು. ಆ ಬಗ್ಗೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿರಲಿಲ್ಲ.
ಇಷ್ಟೆಲ್ಲ ನಡೆಯುತ್ತಿದ್ದರೂ ಈ ಆಸ್ಪತ್ರೆಯಲ್ಲಿ ಸಿಸಿ ಕ್ಯಾಮೆರಾ ಇಲ್ಲದ್ದು ಸಾರ್ವಜನಿಕರ ಅಚ್ಚರಿಗೆ ಕಾರಣವಾಗಿದೆ. ಇನ್ನಾದರೂ ಆಸ್ಪತ್ರೆಯಲ್ಲಿ ಜವಾಬ್ದಾರಿ ಇದ್ದವರು ಸಿಸಿ ಕ್ಯಾಮೆರಾ ಅಳವಡಿಸಿ ಕಳ್ಳತನ ಪ್ರಕರಣ ತಡೆಯಲು ಮುಂದಾಗಬೇಕಿದೆ. ವೈದ್ಯರಿಗೆ ಈ ರೀತಿ ಆದರೆ ರೋಗಿಗಳ, ಅವರ ಸಂಬಂಧಿಕರ ಪಾಡೇನು ಅನ್ನುವ ಪ್ರಶ್ನೆ ಎದುರಾಗಿದೆ.