ಮೈಸೂರು: ಕಾಂಗ್ರೆಸ್ ಪಕ್ಷಕ್ಕೆ ನನ್ನ ಭಯವಿದೆ, ಅದಕ್ಕೆ ನನ್ನನ್ನು ಟಾರ್ಗೆಟ್ ಮಾಡುತ್ತಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದವರಿಗೆ ಜನರ ಕೆಲಸ ಮಾಡುವುದು ಬಿಟ್ಟು ರಾಜಕೀಯ ಮಾಡುವುದರಲ್ಲಿ ಹೆಚ್ಚು ಆಸಕ್ತಿ ಇದೆ. ಕಾಂಗ್ರೆಸ್ ಪಕ್ಷಕ್ಕೆ ನನ್ನನ್ನು ಕಂಡರೆ ಭಯ. ನನ್ನೊಬ್ಬನ ಮೇಲೆಯೇ ಆ ಪಕ್ಷಕ್ಕೆ ಅತಿಯಾದ ಭಯವಿದೆ.
ಈಗಾಗಿ ಪದೇಪದೇ ಕಾಂಗ್ರೆಸ್ ಮುಖಂಡರು ನನ್ನ ಹೆಸರನ್ನು ಜಪ ಮಾಡುತ್ತಿರುತ್ತಾರೆ. ಬಿಜೆಪಿ – ಜೆಡಿಎಸ್ ಜೊತೆಯಾದ ಮೇಲಂತೂ ಕಾಂಗ್ರೆಸ್ ನಾಯಕರಿಗೆ ನಿದ್ದೆಯೇ ಬರುತ್ತಿಲ್ಲ. ಈಗಾಗಿ ನನ್ನ ಮೇಲೆ ಪದೇಪದೇ ಟಾರ್ಗೆಟ್ ಮಾಡಿ ಮಾತನಾಡುತ್ತಿದ್ದಾರೆ ಎಂದು ಕೇಂದ್ರ ಸಚಿವರು ನೇರ ಆರೋಪ ಮಾಡಿದರು.
ಮುಂದೆ ಕೂಡ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ, ಸಂತೋಷ. ಮುಂದಿನ ಐದು ವರ್ಷ ಅಲ್ಲದಿದ್ದರೆ ಐವತ್ತು ವರ್ಷ ಅವರೇ ಆಳ್ವಿಕೆ ಮಾಡಲಿ. ಮೊದಲು ಜನರು ಹೇಳಿದ ಕೆಲಸ ಮಾಡಿ.
ಇಪ್ಪತ್ತು ವರ್ಷ ನಮ್ಮದೇ ಸರ್ಕಾರ ಎಂದವರು ಏನೇನಾದರೂ ಎನ್ನುವುದು ನನಗೆ ಗೊತ್ತಿದೆ. ಮುಂದೆ ಯಾರದ್ದು ಸರ್ಕಾರ ಎಂಬುದನ್ನು ಜನರೇ ತೀರ್ಮಾನ ಮಾಡುತ್ತಾರೆ. ಕಾಂಗ್ರೆಸ್ ನಲ್ಲಿ ಸಿಎಂ ಖುರ್ಚಿಗಾಗಿ ಗಲಾಟೆಗಳೇ ನಡೆಯುತ್ತಿದೆ. ಗಲಾಟೆಯಲ್ಲಿ ಮುಳುಗಿರುವ ಕಾಂಗ್ರೆಸ್ ಪಕ್ಷವನ್ನು ಜನ ಹೇಗೆ ಒಪ್ಪುತ್ತಾರೆ? ಜನ ಎಲ್ಲವನ್ನೂ ಗಮನಿಸುತ್ತಿದ್ದಾರೆ ಎಂದು ಕೇಂದ್ರ ಸಚಿವರು ಟೀಕಾಪ್ರಹಾರ ನಡೆಸಿದರು.