ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಸಮೀಪದ ನಿಡಗುಂದಿಯ ಬಾಲಕರ ಮಾದರಿ ಕೇಂದ್ರ ಶಾಲೆಗೆ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಭರತ್ ಎಸ್ ಭೇಟಿ ನೀಡಿ ಶಾಲೆಯ ಎಲ್ಲ ವಿಭಾಗಗಳ ಕಾರ್ಯ ವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಲೆಯ ಮುಖ್ಯ ಶಿಕ್ಷಕಿ ಲಲಿತಾ ಕಳಕಣ್ಣವರ ಅಧಿಕಾರಿಗಳನ್ನು ಸ್ವಾಗತಿಸಿ ಶಾಲೆಯ ಎಲ್ಲ ವಿಭಾಗಗಳನ್ನು ಪರಿಚಯಿಸಿದರು. ಶಾಲಾ ಕಚೇರಿ ಮತ್ತು ಮುಖ್ಯ ದಾಖಲೆಗಳನ್ನು ಪರಿಶೀಲಿಸಿದ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು, ಅಕ್ಷರ ದಾಸೋಹದ ಕೋಣೆಗೆ ತೆರಳಿ ಅಲ್ಲಿನ ಅಡುಗೆ ವ್ಯವಸ್ಥೆಯನ್ನು, ಅಡುಗೆದಾರರ ಶಿಸ್ತನ್ನು ಗಮನಿಸಿದರು.
ವರ್ಗ ಕೋಣೆಗಳಿಗೆ ತೆರಳಿ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯದ ಬಗ್ಗೆ ವಿಚಾರಿಸಿದರು. ಸಹ ಶಿಕ್ಷಕರಿಂದ ಅನೇಕ ಮಾಹಿತಿಗಳನ್ನು ಪಡೆದುಕೊಂಡ ಕಾರ್ಯನಿರ್ವಾಹಕ ಅಧಿಕಾರಿಗಳು, ಒಟ್ಟಾರೆ ಶಾಲೆಯ ಪ್ರಗತಿಯ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ನಂತರ ಶಾಲಾ ಸಿಬ್ಬಂದಿಯವರೊಂದಿಗೆ ಸಭೆ ನಡೆಸಿದ ಅವರು, ಶಾಲೆಯ ಕಲಿಕಾ ಪ್ರಗತಿ, ವಿದ್ಯಾರ್ಥಿಗಳ ದಾಖಲಾತಿ, ಹಾಜರಾತಿ ಹೆಚ್ಚಿಸುವ ಕುರಿತು ಅನೇಕ ಸಲಹೆ ಸೂಚನೆಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎ. ಫಣಿಬಂದ, ತಾಲೂಕಾ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಆರ್.ಎಲ್. ನಾಯಕ, ಎಂ.ಬಿ. ದೊಡ್ಡಮನಿ, ಶಿಕ್ಷಕಿಯರಾದ ಎಸ್.ಕೆ. ಕೊಟಗಿ, ಪಿ.ಕೆ. ಶೇಬಗೊಂಡ, ಡಿ.ಎಸ್. ಮುಂಡರಗಿ, ಗ್ರಾ.ಪಂ ಅಧ್ಯಕ್ಷರು, ಅಧಿಕಾರಿಗಳು ಉಪಸ್ಥಿತರಿದ್ದರು.