ಬೆಂಗಳೂರು: ಕೇಂದ್ರ ಸರ್ಕಾರವು ಹಿಂದಿನಂತೆಯೇ ಕರ್ನಾಟಕವನ್ನು ಕಡೆಗಣಿಸದೆ ರಾಜ್ಯಕ್ಕೂ ಡಿಫೆನ್ಸ್ ಕಾರಿಡಾರ್ ನೀಡಬೇಕು ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಆಗ್ರಹಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಹಿಂದೆ ತಮಿಳುನಾಡು ಮತ್ತು ಉತ್ತರ ಪ್ರದೇಶಕ್ಕೆ ಡಿಫೆನ್ಸ್ ಕಾರಿಡಾರ್ ಮಂಜೂರು ಮಾಡಲಾಗಿತ್ತು.
ಈ ಲೋಪವನ್ನು ನಾನು ಆಗಲೇ ಕೇಂದ್ರದ ಗಮನಕ್ಕೆ ತಂದಿದ್ದೇನೆ. ಈಗ ಕೋಲಾರ-ಚಿಕ್ಕಬಳ್ಳಾಪುರ ಮತ್ತು ಹುಬ್ಬಳ್ಳಿ-ಬೆಳಗಾವಿ ನಡುವೆ ಎರಡು ಕಾರಿಡಾರ್ ನೀಡಬೇಕೆಂದು ನಾವು ಒತ್ತಾಯಿಸುತ್ತಿದ್ದೇವೆ ಎಂದು ತಿಳಿಸಿದರು. ಈ ಕುರಿತು ಮನದಟ್ಟು ಮಾಡಲು ಬುಧವಾರ ನವದೆಹಲಿಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಲಿದ್ದು, ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಹಾಜರಿರಲಿದ್ದಾರೆ ಎಂದು ಪಾಟೀಲ್ ತಿಳಿಸಿದ್ದಾರೆ.
ಕರ್ನಾಟಕ ರಕ್ಷಣಾ ಹಾಗೂ ವೈಮಾಂತರಿಕ್ಷ ಕ್ಷೇತ್ರದಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿದೆ. ಬೆಳಗಾವಿಯಲ್ಲಿ ಈಗಾಗಲೇ ಹಲವು ಪ್ರಮುಖ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಕರ್ನಾಟಕಕ್ಕೂ ಡಿಫೆನ್ಸ್ ಕಾರಿಡಾರ್ ನೀಡುವುದು ನ್ಯಾಯಸಮ್ಮತವಾಗಿದೆ. ಫೆಬ್ರವರಿಯಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶದ ಸಂದರ್ಭದಲ್ಲಿ ಈ ವಿಷಯವನ್ನು ರಾಜನಾಥ್ ಸಿಂಗ್ ಅವರ ಗಮನಕ್ಕೆ ತರುವಂತಾಯಿತು ಎಂದು ಅವರು ಹೇಳಿದರು.