ಬಂಗಾರಪೇಟೆ: ಕೋಲಾರ ಜಿಲ್ಲೆಯಲ್ಲಿ ನೇರಳೆ ಹಣ್ಣು ತಿಂದು 7 ಮಂದಿ ವಿದ್ಯಾರ್ಥಿಗಳು ಅಸ್ವಸ್ಥರಾಗಿರುವ ಘಟನೆ ನಡೆದಿದೆ.ಅಸ್ವಸ್ಥರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಪುತ್ರಸೊನ್ನೇನಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ನಿನ್ನೆ ಮಧ್ಯಾಹ್ನ ಊಟದ ಬಳಿಕ ಶಾಲೆಯ ಆವರಣದ ಪಕ್ಕದಲ್ಲಿದ್ದ ನೇರಳೆ ಹಣ್ಣು ತಿಂದಿದ್ದಾರೆ.
ಬಳಿಕ 7 ವಿದ್ಯಾರ್ಥಿಗಳಿಗೆ ವಾಂತಿ, ಭೇದಿಯಾಗಿದೆ. ಕೂಡಲೇ ಅಸ್ವಸ್ಥಗೊಂಡ 6 ವಿದ್ಯಾರ್ಥಿಗಳನ್ನು ಬಂಗಾರಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಒರ್ವ ವಿದ್ಯಾರ್ಥಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇತ್ತ ವಿಷಯ ತಿಳಿದು ಸ್ಥಳಕ್ಕೆ ಬಿಇಓ ಗುರುಮೂರ್ತಿ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಪಡೆದುಕೊಂಡಿದ್ದಾರೆ.
ಬಳಿಕ ಪ್ರತಿಕ್ರಿಯಿಸಿದ ಅವರು, ಶಾಲೆಯ ಪಕ್ಕದಲ್ಲಿ ವಾಸವಿರುವ ರೈತರು ನೇರಳೆ ಹಣ್ಣುಗಳಿರುವ ಮರವನ್ನು ಕಡಿದು ಅಲ್ಲಿ ಹಾಕಿದ್ದಾರೆ. ಹಾಗಾಗಿ ಹಣ್ಣಾಗಿದ್ದ ನೇರಳೆ ತಿಂದು ಮಕ್ಕಳಲ್ಲಿ ವಾಂತಿ ಭೇದಿ ಕಾಣಿಸಿಕೊಂಡಿದೆ. ಕೂಡಲೇ ಮಕ್ಕಳನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಮಕ್ಕಳಿಗೆ ಯಾವುದೇ ತೊಂದರೆ ಇಲ್ಲ ಎಂದು ತಿಳಿಸಿದ್ದಾರೆ.