ಬೆಂಗಳೂರು: ಕಾಂಗ್ರೆಸ್‌ನ ಹಿರಿಯ ನಾಯಕ ಮತ್ತು ಮಾಜಿ ಸಚಿವ ಆರ್.ವಿ. ದೇಶಪಾಂಡೆ ಅವರು, ರಾಜ್ಯದಲ್ಲಿ ಮಂತ್ರಿ ಸ್ಥಾನ ನೀಡುವ ಕುರಿತಾಗಿ ಅಸಮಾಧಾನವನ್ನು ಪರೋಕ್ಷವಾಗಿ ವ್ಯಕ್ತಪಡಿಸಿದ್ದಾರೆ. 224 ಮಂದಿ ಶಾಸಕರಿಗೆ ಮಂತ್ರಿಯಾಗಲು ಅರ್ಹತೆ ಇದೆ. ಆದರೆ ಎಲ್ಲರನ್ನೂ ಮಂತ್ರಿ ಮಾಡೋಕೆ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಸುರ್ಜೇವಾಲಾ ಸಭೆ ಮಾಡುತ್ತಿರುವ ವಿಚಾರಕ್ಕೆ ನಗರದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ನಾನು ಇವತ್ತು ಸುರ್ಜೇವಾಲಾ ಅವರನ್ನು ಭೇಟಿ ಮಾಡುತ್ತೇನೆ. ಏನು ಚರ್ಚೆ ಮಾಡಲ್ಲ, ಯಾವುದೇ ವಿಚಾರ ಚರ್ಚೆ ಮಾಡಲ್ಲ. ಅವರು ಆರಾಮಾಗಿದ್ದಾರೆ, ನಾವು ಆರಾಮವಾಗಿದ್ದೇವೆ ಎಂದು ಹೇಳುತ್ತೇನೆ ಎಂದರು.
ನೀವು ಸಚಿವ ಸ್ಥಾನ ಕೇಳ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಎಲ್ಲರೂ ಸಚಿವರು ಆಗಲು ಸಾಧ್ಯನಾ? 224 ಸದಸ್ಯರಿದ್ದಾರೆ. 30 ರಿಂದ 35 ಜನರು ಸಚಿವರಾಗಬಹುದು. ಮಂತ್ರಿ ಆಗಬೇಕು ಎಂಬ ಆಸೆ ಇದ್ರೆ ತಪ್ಪಿಲ್ಲ. ಅರ್ಹತೆ ಎಲ್ಲರಿಗೂ ಇದೆ, ಆದರೆ ಎಲ್ಲರೂ ಆಗಲು ಸಾಧ್ಯವಿಲ್ಲ ಎಂದರು.