ವಿಜಯಸಾಕ್ಷಿ ಸುದ್ದಿ, ಬೆಂಗಳೂರು
ಐಎಎಸ್ ಅಧಿಕಾರಿಯಾಗಿ ರೋಹಿಣಿ ಸಿಂಧೂರಿ ಅವರ ಜೀವನ ಸಾಧನೆ ಸಿನಿಮಾ ರೂಪದಲ್ಲಿ ಮೂಡಿ ಬರಲಿದೆ. ಅವರ ಜೀವನದ ಸಾಧಾನೆಗಳನ್ನೇ ಆಧರಿಸಿದ ಸಿನಿಮಾ ನಿರ್ಮಾಣ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ. ಈ ಚಿತ್ರವನ್ನು ಕೃಷ್ಣ ಸ್ವರ್ಣಸಂದ್ರ ಅವರು ನಿರ್ಮಾಣ ಮಾಡಿ ನಿರ್ದೇಶಿಸಲಿದ್ದಾರೆ. ರಂಗಭೂಮಿ ಕಲಾವಿದೆ ಅಕ್ಷತಾ ಪಾಂಡವಪುರ ಅವರು ಸಿಂಧೂರಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಲಾಕ್ ಡೌನ್ ಮುಗಿದ ನಂತರ ಸಿನಿಮಾ ಚಿತ್ರೀಕರಣ ಆರಂಭವಾಗಲಿದೆ ಎಂದು ಹೇಳಲಾಗಿದೆ. ‘ಭಾರತ ಸಿಂಧೂರಿ’ ಎಂಬ ಹೆಸರಿನಲ್ಲಿ ಈ ಸಿನಿಮಾ ತೆರೆಗೆ ಬರಲಿದೆ. ರೋಹಿನಿ ಸಿಂಧೂರಿ ಅವರು ಹುಟ್ಟಿ ಬೆಳೆದ ಆಂಧ್ರಪ್ರದೇಶ ಹಾಗೂ ಕರ್ತವ್ಯ ನಿರ್ವಹಿಸಿದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಚಿತ್ರೀಕರಣ ನಡೆಸಲಾಗುತ್ತದೆ. ರೋಹಿಣಿ ಸಿಂಧೂರಿಯವರು ಮಂಡ್ಯ, ಮೈಸೂರು, ಹಾಸನ, ಬೆಂಗಳೂರು ಭಾಗದಲ್ಲಿ ಕಾರ್ಯನಿರ್ವಹಿಸಿರುವುದರಿಂದ ಈ ಎಲ್ಲ ಪ್ರದೇಶಗಳಲ್ಲಿ ಚಿತ್ರೀಕರಣ ನಡೆಸಲಾಗುತ್ತದೆ. ಅವರು ಅಧಿಕಾರವಧಿಯ ಸಾಧನೆಗಳನ್ನು ಪ್ರಮುಖವಾಗಿಟ್ಟುಕೊಂಡು ಸಿನಿಮಾ ನಿರ್ಮಿಸಲಾಗುವುದು ಎಂದು ಹೇಳಲಾಗಿದೆ.
ರೋಹಿಣಿ ಸಿಂಧೂರಿ ಅವರು ನಿರ್ಗಮಿತ ಮೈಸೂರು ಜಿಲ್ಲಾಧಿಕಾರಿ. ಈಗಾಗಲೇ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಟೈಟಲ್ ರಿಜಿಸ್ಟರ್ ಆಗಿದೆ. ಕಥೆ, ಚಿತ್ರಕಥೆ, ಸಾಹಿತ್ಯ, ರಚನೆ, ನಿರ್ದೇಶನದ ಜವಾಬ್ದಾರಿಯನ್ನು ಕೃಷ್ಣ ಸ್ವರ್ಣಸಂದ್ರ ಅವರು ಹೊತ್ತಿದ್ದಾರೆ. ಇವರು ಮಂಡ್ಯ ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿದ್ದಾರೆ. ರಾಜರ್ಷಿ ನಾಲ್ವಡಿ ಕೃಷ್ಣರಾಜ ಫಿಲಂಸ್ ಬ್ಯಾನರ್ ನಡಿ ಈ ಚಿತ್ರ ನಿರ್ಮಾಣ ಆಗಲಿದೆ. ಕಳೆದ ವರ್ಷ ಜೂ. 20ರಂದೇ ಈ ಚಿತ್ರದ ಟೈಟಲ್ ರಿಜಿಸ್ಟರ್ ಆಗಿದೆ.



