ಬೆಂಗಳೂರು: ಕಿಟ್ಟಿ ಪಾರ್ಟಿಗಳಲ್ಲಿ ಪರಿಚಯವಾದ ಶ್ರೀಮಂತ ಮಹಿಳೆಯರನ್ನು ಲಕ್ಷಾಂತರ-ಕೋಟಿಕೋಟಿ ರೂಪಾಯಿ ವಂಚಿಸಿದ ಆರೋಪದಡಿ ಸವಿತಾ ಎಂಬ ಮಹಿಳೆಯನ್ನು ಬಸವೇಶ್ವರನಗರ ಪೊಲೀಸರು ಬಂಧಿಸಿದ್ದಾರೆ. ಸುಮಾರು 20ಕ್ಕೂ ಹೆಚ್ಚು ಮಹಿಳೆಯರಿಂದ ಒಟ್ಟು ₹30 ಕೋಟಿ ಗಿಂತಲೂ ಹೆಚ್ಚು ಹಣವನ್ನು ವಂಚಿಸಿದ್ದಾಳೆ.
ಸಿರಿವಂತ ಮಹಿಳೆಯರನ್ನು ಕಿಟ್ಟಿ ಪಾರ್ಟಿ ನೆಪದಲ್ಲಿ ಆಕರ್ಷಿಸುತ್ತಿದ್ದ ಸವಿತಾ, ಮನೆಗೆ ಕರೆದು ಊಟೋಪಚಾರ ಮಾಡಿಸಿ ಅವರ ವಿಶ್ವಾಸ ಗಳಿಸುತ್ತಿದ್ದಳು. ಬಳಿಕ ತನಗೆ ಸಿಎಂ ಸಿದ್ದರಾಮಯ್ಯ , ಡಿಸಿಎಂ ಡಿ.ಕೆ ಶಿವಕುಮಾರ್ ಸೇರಿದಂತೆ ಹಲವು ರಾಜಕಾರಣಿಗಳು, ಪ್ರಭಾವಿಗಳು ಪರಿಚಯವಿದ್ದಾರೆ ಎಂದು ಹೇಳಿ ಹಣ ಡಬಲ್ ಮಾಡಿಕೊಡುವುದು, ಕಡಿಮೆ ಬೆಲೆಯಲ್ಲಿ ಚಿನ್ನ ಕೊಡುವುದು ಮುಂತಾದ ಆಮಿಷ ತೋರಿಸಿ ಸಾಲ ಪಡೆಯುತ್ತಿದ್ದಳು. ಇದೇ ರೀತಿ ಒಬ್ಬೊಬ್ಬರಿಂದ 50 ಲಕ್ಷದಿಂದ 2.5 ಕೋಟಿ ರೂ. ವರೆಗೆ ಹಣ ಪಡೆದು ವಂಚಿಸಿದ್ದಳು.
ಮಹಿಳೆಯರು ನೀಡಿದ ದೂರಿನ ಮೇರೆಗೆ ಸವಿತಾಳನ್ನು ಬಸವೇಶ್ವರ ನಗರ ಪೊಲೀಸರು ಬಂಧಿಸಿದ್ದಾರೆ. ಈಕೆಯ ಮೇಲೆ ಈ ಹಿಂದೆಯೂ ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಬಂಧಿಸಲಾಗಿತ್ತು. ಬಂಧನದ ಬಳಿಕವೂ ಹಳೆಯ ಚಾಳಿ ಮುಂದುವರೆಸಿದ್ದಾಳೆಂದು ಪೊಲೀಸರು ತಿಳಿಸಿದ್ದಾರೆ.