ಬಾಲಿವುಡ್ ನಟಿ ಅಲಿಯಾ ಭಟ್‌ರ ಮಾಜಿ ಆಪ್ತ ಕಾರ್ಯದರ್ಶಿಯನ್ನ ಜುಹು ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಅಲಿಯಾ ಭಟ್ ಪ್ರೊಡಕ್ಷನ್ ಹೌಸ್ ಎಟರ್ನಾಲ್ ಪ್ರೊಡಕ್ಷನ್ ಪ್ರೈವೇಟ್ ಲಿಮಿಟೆಡ್ ಹಾಗೂ ಅಲಿಯಾ ಭಟ್ ವೈಯಕ್ತಿಕ ಬ್ಯಾಂಕ್ ಖಾತೆಯಿಂದ 77 ಲಕ್ಷ ರೂಪಾಯಿ ಹಣ ಎಗರಿಸಿ ವೇದಿಕಾ ಪ್ರಕಾಶ್ ಶೆಟ್ಟಿ ನಾಪತ್ತೆಯಾಗಿದ್ದರು. ಇದೀಗ ವೇದಿಕಾಳನ್ನು ಬೆಂಗಳೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ.
2022ರ ಮೇ ಮತ್ತು 2024ರ ಆಗಸ್ಟ್ ತಿಂಗಳ ನಡುವೆ ವೇದಿಕಾ ಹಣ ವಂಚನೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆಲಿಯಾ ಭಟ್ ಅವರ ತಾಯಿ, ನಟಿ-ನಿರ್ದೇಶಕಿ ಸೋನಿ ರಜ್ದಾನ್ ಕಳೆದ ಜನವರಿ 23ರಂದು ಜುಹು ಪೊಲೀಸರಿಗೆ ದೂರು ನೀಡಿದ್ದು ಇದೀಗ ಬೆಂಗಳೂರಿನಲ್ಲಿ ವಂಚಕಿಯನ್ನು ಬಂಧಿಸಲಾಗಿದೆ.
ಮೂರು ವರ್ಷಗಳ ಕಾಲ ಅಲಿಯಾ ಭಟ್ಗೆ ಪರ್ಸನಲ್ ಅಸಿಸ್ಟೆಂಟ್ ಆಗಿದ್ದ ವೇದಿಕಾ ಶೆಟ್ಟಿ ಬರೋಬ್ಬರಿ 77 ಲಕ್ಷ ರೂಪಾಯಿ ಹಣ ವಂಚಿಸಿದ್ದರು. ಅಲಿಯಾ ಭಟ್‌ರ ವೈಯಕ್ತಿಕ ಮತ್ತು ಬ್ಯುಸಿನೆಸ್ ವ್ಯವಹಾರಗಳನ್ನು, ಪ್ರೊಡಕ್ಷನ್ ಹೌಸ್ನ ಕೆಲಸಗಳನ್ನು ವೇದಿಕಾ ಶೆಟ್ಟಿ ನೋಡಿಕೊಳ್ಳುತ್ತಿದ್ದರು. ಕ್ರಿಮಿನಲ್ ನಂಬಿಕೆ ದ್ರೋಹ, ವಂಚನೆ ಆರೋಪದಡಿ ವೇದಿಕಾ ಶೆಟ್ಟಿ ವಿರುದ್ಧ ಕೇಸ್ ದಾಖಲಾಗಿತ್ತು. ದೂರು ದಾಖಲಾದ ಐದು ತಿಂಗಳ ಬಳಿಕ ವೇದಿಕಾರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ವೇದಿಕಾ ಫೇಕ್ ಬಿಲ್ ಸೃಷ್ಟಿಸಿ, ಅಲಿಯಾ ಭಟ್ ಅವರ ಸಹಿ ಪಡೆದು ಹಣವನ್ನು ಲಪಟಾಯಿಸಿದ್ದಾರೆ. ನಟಿ ಅಲಿಯಾ ಭಟ್ ಅವರ ಟ್ರಾವೆಲ್, ಮೀಟಿಂಗ್, ಇತರೆ ವ್ಯವಸ್ಥೆಗಳಿಗಾಗಿ ಹಣ ಖರ್ಚಾಗಿರುವ ಬಿಲ್ ತಯಾರು ಮಾಡಿ ಸಹಿಯನ್ನು ವೇದಿಕಾ ಶೆಟ್ಟಿ ಪಡೆದಿದ್ದರು. ಫೇಕ್ ಬಿಲ್ಗಳನ್ನು ಅಸಲಿ ಬಿಲ್ಗಳೆಂಬಂತೆ ಬಿಂಬಿಸಿ ವೇದಿಕಾ ಶೆಟ್ಟಿ, ನಟಿ ಅಲಿಯಾ ಭಟ್ ಅವರಿಂದ ಚೆಕ್ಗಳಿಗೆ ಸಹಿ ಪಡೆದಿದ್ದರು. ಹಣವನ್ನು ತನ್ನ ಸ್ನೇಹಿತರ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಂಡಿದ್ದ ವೇದಿಕಾ ಶೆಟ್ಟಿ, ಬಳಿಕ ಸ್ನೇಹಿತರ ಬ್ಯಾಂಕ್ ಖಾತೆಯಿಂದ ತನ್ನ ವೈಯಕ್ತಿಕ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಿಕೊಂಡಿದ್ದರು. ಸದ್ಯ ವೇದಿಕಾಳನ್ನು ಬಂಧಿಸಿರುವ ಬೆಂಗಳೂರು ಪೊಲೀಸರು ಮುಂಬೈ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.