ಪಂಚ ಪೀಠಗಳಿಗೆ ಮಹತ್ವಪೂರ್ಣ ಹಿನ್ನೆಲೆಯಿದೆ

0
oplus_2
Spread the love

ವಿಜಯಸಾಕ್ಷಿ ಸುದ್ದಿ, ಅಜ್ಜಂಪುರ: ಕಾರಣಿಕ ಯುಗಪುರುಷ, ಪರಮ ತಪಸ್ವಿ ಲಿಂ.ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳು ಬುಕ್ಕಾಂಬುಧಿ ಬೆಟ್ಟಕ್ಕೆ ದಯಮಾಡಿಸಿ ನೂರು ವರುಷ ತುಂಬಿದ ಸವಿನೆನಪಿಗಾಗಿ ಬರಲಿರುವ ನವಂಬರ್ 23ರಂದು ಶುಭಾಗಮನ ಶತಮಾನೋತ್ಸವ ಸಮಾರಂಭ ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಶ್ರೀಮದ್ ಉಜ್ಜಯಿನಿ ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯ ಟ್ರಸ್ಟಿನ ಅಧ್ಯಕ್ಷರಾದ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಪ್ರಕಟಪಡಿಸಿದರು.

Advertisement

ಅವರು ಬುಕ್ಕಾಂಬುಧಿ ಬೆಟ್ಟದ ಮೇಲಿನ ತಪೋಕ್ಷೇತ್ರದಲ್ಲಿ ಶುಭಾಗಮನ ಶತಮಾನೋತ್ಸವ ಪೂರ್ವಭಾವಿ ಸಮಾಲೋಚನಾ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಸಕಲ ಜೀವಾತ್ಮರಿಗೂ ಒಳಿತನ್ನೇ ಬಯಸಿದ ವೀರಶೈವ ಧರ್ಮದಲ್ಲಿ ಪಂಚ ಪೀಠಗಳಿಗೆ ಮಹತ್ವಪೂರ್ಣ ಹಿನ್ನೆಲೆಯಿದೆ. ಲೋಕಕಲ್ಯಾಣಕ್ಕಾಗಿ ಮತ್ತು ಜನಹಿತಕ್ಕಾಗಿ ಲಿಂ.ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳು 3 ತಿಂಗಳ ಕಾಲ ತಪಸ್ಸು ಮಾಡಿ ಭಕ್ತರಿಗೆ ಬಂದ ಕಷ್ಟಗಳನ್ನು ಪರಿಹರಿಸಿದರು. ಅವರು ಮಾಡಿದ ತಪಸ್ಸು, ತೋರಿದ ದಾರಿ ಸರ್ವರಿಗೂ ಒಳ್ಳೆಯದನ್ನು ಉಂಟು ಮಾಡಿದೆ. ಅವರು ಬುಕ್ಕಾಂಬುಧಿ ಬೆಟ್ಟಕ್ಕೆ ದಯಮಾಡಿಸಿ ನೂರು ವರುಷ ತುಂಬಿದ ಸಂದರ್ಭದ ಸವಿನೆನಪಿಗಾಗಿ ಶುಭಾಗಮನ ಶತಮಾನೋತ್ಸವ ಸಮಾರಂಭ ಜರುಗಲಿದೆ. ಇದೇ ಸಂದರ್ಭದಲ್ಲಿ ಅವರ ಪವಿತ್ರ ಜೀವನ ಸಾಧನೆ-ಸಿದ್ಧಿಗಳನ್ನು ವಿವರಿಸುವ ಹಲವಾರು ವಿದ್ವಾಂಸರ ಲೇಖನಗಳನ್ನು ಒಳಗೊಂಡ ಸ್ಮರಣ ಸಂಚಿಕೆ ಹೊರತರಲಾಗುವುದು ಎಂದರು.

ಸಾನ್ನಿಧ್ಯ ವಹಿಸಿದ ಇಂದಿನ ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳು ಆಶೀರ್ವಚನ ನೀಡಿ, ಶ್ರೀ ಉಜ್ಜಯಿನಿ ಜಗದ್ಗುರು ಸದ್ಧರ್ಮ ಪೀಠದಿಂದ ಬುಕ್ಕಾಂಬುಧಿ ಬೆಟ್ಟದವರೆಗೆ ಪಾದಯಾತ್ರೆ ಕೈಗೊಳ್ಳುತ್ತೇವೆ. ಆ ಪಾದಯಾತ್ರೆಗೆ ಶ್ರೀ ರಂಭಾಪುರಿ ಜಗದ್ಗುರುಗಳು ದಯಮಾಡಿಸಿ ಚಾಲನೆ ನೀಡಿ ಉದ್ಘಾಟಿಸಬೇಕೆಂದು ಬಯಸಿದ ಉಜ್ಜಯಿನಿ ಜಗದ್ಗುರುಗಳು ದಾರಿಯುದ್ದಕ್ಕೂ ಬರುವ ಗ್ರಾಮ, ನಗರಗಳಲ್ಲಿ ಲಿಂ.ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳವರ ಭವ್ಯ ಜೀವನ ದರ್ಶನ ಪ್ರವಚನ ನೆರವೇರಿಸುತ್ತಾ ಬರಲಾಗುತ್ತದೆ. ಸಾವಿರಾರು ಜನರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವರೆಂದು ತಿಳಿಸಿದರು.

ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯರು ಮತ್ತು ಹುಲಿಕೆರೆ ವಿರೂಪಾಕ್ಷಲಿಂಗ ಶಿವಾಚಾರ್ಯರು ನೇತೃತ್ವ ವಹಿಸಿದ್ದರು. ಈ ಅಪೂರ್ವ ಸಮಾರಂಭದಲ್ಲಿ ಹುಣಸಘಟ್ಟ, ನಂದಿಪುರ, ಹಣ್ಣೆ, ಬೀರೂರು, ಕೆ.ಬಿದರೆ, ತಾವರೆಕೆರೆ, ಬಿಳಕಿ, ಬೇರುಗಂಡಿಮಠದ ಶ್ರೀಗಳು ಉಪಸ್ಥಿತರಿದ್ದರು. ಟ್ರಸ್ಟಿನ ಉಪಾಧ್ಯಕ್ಷ ವೀರಭದ್ರಪ್ಪ, ಕಾರ್ಯದರ್ಶಿ ಹೆಚ್.ಪಿ. ಸುರೇಶ್, ಟ್ರಸ್ಟಿನ ಪದಾಧಿಕಾರಿಗಳಲ್ಲದೇ ಲಿಂಗದಹಳ್ಳಿ ರವಿ, ಚಿಕ್ಕಮಗಳೂರು ಶಿವಾನಂದಸ್ವಾಮಿ, ಬೆಟ್ಟದಹಳ್ಳಿ ರವಿ, ಹಿರೇಕಾನವಂಗಲ ಕುಮಾರ್, ಅಜ್ಜಂಪುರ ಕೃಷ್ಣಮೂರ್ತಿ, ಶಂಬೈನೂರು ಆನಂದ, ಓಂ ಪ್ರಕಾಶ ಪಾಟೀಲ, ಎಸ್.ವಿ. ಗಂಗಾಧರಯ್ಯ, ಬಾವಿಕೆರೆ ಸೀತಾರಾಂ, ಗೌರಾಪುರ ಪ್ರಕಾಶ, ಚನ್ನಾಪುರ ಸಿದ್ಧೇಗೌಡ್ರು, ಚಿತ್ರದುರ್ಗದ ಕೆ.ಸಿ. ರುದ್ರೇಶ, ಉಜ್ಜನಿ ಚನ್ನವೀರಯ್ಯ, ಬಿ.ಶಿವಕುಮಾರ, ಉಜ್ಜನಿ ಸಿದ್ಧಲಿಂಗಸ್ವಾಮಿ, ಎಸ್.ಜಿ. ಮಹಾನುಭಾವಿಮಠ, ರವಿ, ಅನಿಲ್ ಕುಮಾರ್, ಬೀರೂರು ನವೀನ್ ಪಾಲ್ಗೊಂಡು ಜಗದ್ಗುರುಗಳಿಂದ ಆಶೀರ್ವಾದ ಪಡೆದರು.

ಬಿ.ಮಹೇಶ್ವರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿ.ಎಂ. ಗುರುಮೂರ್ತಿ ಸ್ವಾಗತಿಸಿದರು. ಹೆಚ್.ಪಿ. ಮಲ್ಲಿಕಾರ್ಜುನ ನಿರೂಪಿಸಿದರು.

ತರೀಕೆರೆ ಕ್ಷೇತ್ರದ ಶಾಸಕ ಜಿ.ಹೆಚ್. ಶ್ರೀನಿವಾಸ ಮಾತನಾಡಿ, ನವಂಬರ್ 22ರಂದು ಬುಕ್ಕಾಂಬುಧಿ ಕ್ಷೇತ್ರದಲ್ಲಿ ಉಚಿತ ಸಾಮೂಹಿಕ ವಿವಾಹ ಸಮಾರಂಭ ಹಾಗೂ ಶ್ರೀ ಜಗದ್ಗುರು ಪಂಚಪೀಠಾಧೀಶ್ವರರ ಅಡ್ಡಪಲ್ಲಕ್ಕಿ ಮಹೋತ್ಸವ ನೆರವೇರಿಸಲಾಗುವುದು. ಕಾರ್ಯಕ್ರಮದ ಯಶಸ್ವಿಗೆ ಎಲ್ಲರೂ ಸಹಕರಿಸಬೇಕೆಂದರು.


Spread the love

LEAVE A REPLY

Please enter your comment!
Please enter your name here