ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ: ಕೇಂದ್ರ ಸರ್ಕಾರಗವು ಅಭಿವೃದ್ಧಿಯ ಹೆಸರಿನಲ್ಲಿ ಕಾರ್ಪೋರೇಟ್ ಕಂಪನಿಗಳನ್ನು ಸೇವಕರನ್ನಾಗಿ ಮಾಡಲು ಹೊರಟು ವೇತನ ಸಂಹಿತೆ, ಕೈಗಾರಿಕಾ ಸಂಹಿತೆ, ಕಾನೂನು ಔದ್ಯೋಗಿಕ ಸುರಕ್ಷತೆ, ಮತ್ತು ಕೈಗಾರಿಕಾ ಬಾಂಧವ್ಯ ಸಂಹಿತೆ ಸೇರಿ 29 ಕಾನೂನುಗಳನ್ನು ರೂಪಿಸಿರುವುದು ಖಂಡನೀಯವೆಂದು ಎಐಟಿಯುಸಿ ರಾಜ್ಯ ಸಮಿತಿ ಸದಸ್ಯ ಗುಡಿಹಳ್ಳಿ ಹಾಲೇಶ್ ಆರೋಪಿಸಿದರು.
ಹರಪನಹಳ್ಳಿ ನಗರದ ಜಂಟಿ ಕಾರ್ಮಿಕ ಸಂಘಟನೆಗಳ ಸಮಿತಿ ಹಾಗೂ ರೈತ ಕಾರ್ಮಿಕ ವರ್ಗದಿಂದ ಬುಧವಾರ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಹಮ್ಮಿಕೊಂಡಿದ್ದ ಸಾರ್ವತ್ರಿಕ ಮುಷ್ಕರದಲ್ಲಿ ಅವರು ಮಾತನಾಡಿದರು.
ದೇಶದಲ್ಲಿ ಅತಿಹೆಚ್ಚು ಅಸಂಘಟಿತ ಮತ್ತು ಅನೌಪಚಾರಿಕ ಕಾರ್ಮಿಕರನ್ನು ಕಾನೂನು ಅಡಿಯಲ್ಲಿ ತರಬೇಕು ಮತ್ತು ಕಾರ್ಮಿಕರಿಗೆ ದಿನಕ್ಕೆ 600 ರೂಗಳ ವೇತನ ನಿಗದಿ ಮಾಡಬೇಕೆಂಬ ಕಾರ್ಮಿಕ ಸಂಘಟನೆಗಳ ಬೇಡಿಕೆಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ. ಇದು ಖಂಡನೀಯ ಮತ್ತು ಕಾರ್ಮಿಕರಿಗೆ ಮಾಡುತ್ತಿರುವ ಅನ್ಯಾಯವೆಂದರು.
ಎಐಸಿಸಿಟಿಯು ಜಿಲ್ಲಾಧ್ಯಕ್ಷ ಸಂದೇರ ಪರಶುರಾಮ್ ಮಾತನಾಡಿ, ತೆರಿಗೆಗಳ ಭಾರ ಮತ್ತು ಬೆಲೆ ಏರಿಕೆಯಿಂದ ಜನತೆ ತೀವ್ರ ಸಂಕಷ್ಟದ ಸ್ಥಿತಿಗೆ ತಲುಪುವಂತಾಗಿದೆ. ಕಾರ್ಮಿಕರ ಸಮಾನ ಕೆಲಸಕ್ಕೆ ಸಮಾನ ವೇತನ ತಕ್ಷಣ ಜಾರಿಯಾಗಬೇಕು. ಎಲ್ಲಾ ಸಂಘಟಿತ ಕಾರ್ಮಿಕ ವರ್ಗಕ್ಕೆ ಕನಿಷ್ಠ ವೇತನ ನಿಗದಿಪಡಿಸಬೇಕೆಂದು ಒತ್ತಾಯಿಸಿದರು.
ಸಿಪಿಐ ತಾಲೂಕು ಕಾರ್ಯದರ್ಶಿ ಸಂತೋಷ್ ಎಚ್.ಎಂ ಮಾತನಾಡಿ, ವಿದ್ಯುತ್ ತಿದ್ದುಪಡಿ ಮಸೂದೆ-2022 ಹಿಂಪಡೆಯಬೇಕು, ರೈತರ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿಗೊಳಿಸಿ ಬಿತ್ತನೆ ಬೀಜ, ರಸಗೊಬ್ಬರ ಮತ್ತು ವಿದ್ಯುತ್ ಮೇಲಿನ ಸಬ್ಸಿಡಿ ದರವನ್ನು ಹೆಚ್ಚಿಸಬೇಕು, ಸಮಗ್ರ ಸಾಲ ಮನ್ನಾ ಹಾಗೂ ಬೆಳೆ ವಿಮೆ ಯೋಜನೆಗಳನ್ನು ಜಾರಿಗೆ ತರಬೇಕೆಂದರು.
ಈ ಸಂದರ್ಭದಲ್ಲಿ ಸಿಪಿಐಎಮ್ಎಲ್ ಜಿಲ್ಲಾ ಮುಖಂಡ ಸಂತೋಷ್ ಗುಳೇದ ಹಟ್ಟಿ, ಸಿಪಿಎಂ ಮುಖಂಡ ರಹಮತ್, ಹುಲಿಕಟ್ಟಿ ಮೈಲಪ್ಪ, ಕರಡಿ ದುರ್ಗದ ಚೌಡಪ್ಪ ರೈತ ಸಂಘದ ಮುಖಂಡ, ಬಳಿಗನೂರು ಕೊಟ್ರೇಶ್, ಪೂಜಾರ್ ಬಸವರಾಜ್, ಎಚ್. ವೆಂಕಟೇಶ್, ಪುಷ್ಪ, ಅರುಣ್ ಕುಮಾರ್, ಎಸ್. ಪರುಶುರಾಮ್, ಗೌರಿಹಳ್ಳಿ ಹನುಮಂತ, ಕುಂಚೂರು ಶಫಿವುಲ್ಲಾ, ನಟರಾಜಪ್ಪ, ಬಿ ಭಾಗ್ಯಮ್ಮ ಮುಂತಾದವರಿದ್ದರು.