ಮಂಗಳೂರು ಬೆಡಗಿ, ಬಾಲಿವುಡ್ ನಟಿ ದೀಪಿಕಾ ಪಡುಕೋಣೆಗೆ ಹಾಲಿವುಡ್ ವಾಕ್ ಆಫ್ ಫೇಮ್ ಗೌರವ ಲಭಿಸಿದೆ. ಈ ಮೂಲಕ ಈ ಪಟ್ಟ ಪಡೆದ ಮೊದಲ ಭಾರತೀಯ ನಟಿ ಎಂಬ ಹೆಗ್ಗಳಿಕೆಗೆ ದೀಪಿಕಾ ಪಾತ್ರರಾಗಿದ್ದಾರೆ.
ಹಾಲಿವುಡ್ ವಾಕ್ ಆಫ್ ಫೇಮ್ ನ್ನು ನಿರ್ವಹಿಸುವ ಅಧಿಕೃತ ಸಂಸ್ಥೆಯಾದ ಹಾಲಿವುಡ್ ಚೇಂಬರ್ ಆಫ್ ಕಾಮರ್ಸ್ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಸುದ್ದಿಯನ್ನು ತಿಳಿಸಿದೆ.
“ಹಾಲಿವುಡ್ ಚೇಂಬರ್ ಆಫ್ ಕಾಮರ್ಸ್‌ನ ವಾಕ್ ಆಫ್ ಫೇಮ್ ಆಯ್ಕೆ ಸಮಿತಿಯಿಂದ ಮೋಷನ್ ಪಿಕ್ಚರ್ಸ್, ಟೆಲಿವಿಷನ್, ಲೈವ್ ಥಿಯೇಟರ್/ಲೈವ್ ಪರ್ಫಾರ್ಮೆನ್ಸ್, ರೇಡಿಯೋ, ರೆಕಾರ್ಡಿಂಗ್ ಮತ್ತು ಸ್ಪೋರ್ಟ್ಸ್ ಎಂಟರ್‌ಟೈನ್‌ಮೆಂಟ್ ವಿಭಾಗಗಳಲ್ಲಿ ಮನರಂಜನಾ ವೃತ್ತಿಪರರ ಹೊಸ ಗುಂಪನ್ನು ಹಾಲಿವುಡ್ ವಾಕ್ ಆಫ್ ಫೇಮ್ ಗೌರವ ಸ್ವೀಕರಿಸಲು ಆಯ್ಕೆ ಮಾಡಲಾಗಿದೆ ಎಂದು ಪೋಸ್ಟ್‌ನಲ್ಲಿ ಉಲ್ಲೇಖಿಸಲಾಗಿದೆ.
ಅಮೆರಿಕದ ಲಾಸ್ ಏಂಜಲೀಸ್‌ನ ಹಾಲಿವುಡ್ ಬೌಲೆವಾರ್ಡ್‌ನಲ್ಲಿ ಹಾಲಿವುಡ್‌ನ ವಾಕ್ ಆಫ್ ಫೇಮ್ ಇದೆ. ಇಲ್ಲಿ ನೆಲದ ಮೇಲೆ ಸ್ಟಾರ್ ರೀತಿ ಆಕೃತಿಯನ್ನು ನಿರ್ಮಿಸಿ ಅದರಲ್ಲಿ ನಟ-ನಟಿಯರ ಹೆಸರುಗಳನ್ನು ಬರೆಯಲಾಗುತ್ತದೆ. ಇದನ್ನು ವಾಕ್ ಆಫ್ ಫೇಮ್ ಎಂದು ಕರೆಯುತ್ತಾರೆ.
ಮೋಷನ್ ಪಿಕ್ಚರ್ ವಿಭಾಗದಲ್ಲಿ ದೀಪಿಕಾ ಪಡುಕೋಣೆ ಹೆಸರನ್ನು ವಾಕ್ ಆಫ್ ಫೇಮ್ಗೆ ಆಯ್ಕೆ ಮಾಡಿದ್ದು, 2026ನೇ ಸಾಲಿನಲ್ಲಿ ಅವರ ಹೆಸರನ್ನು ನಮೂದಿಸಲಾಗುತ್ತದೆ. ದೀಪಿಕಾ ಪಡುಕೋಣೆ ಹೆಸರನ್ನು ನಕ್ಷತ್ರದಲ್ಲಿ ಮಾಡಿ ಅದನ್ನು ರಸ್ತೆಗೆ ಅಳವಡಿಸಲಾಗುತ್ತದೆ. ಇದಕ್ಕಾಗಿ ಹಾಲಿವುಡ್ ಚೇಂಬರ್ ಆಫ್ ಕಾಮರ್ಸ್ಗೆ ದೊಡ್ಡ ಮೊತ್ತದ ಹಣವನ್ನು ಸಹ ನೀಡಬೇಕಿದೆ. ಇನ್ಸ್ಟಾಲೇಷನ್ ಮತ್ತು ಮೇಂಟೇನೆನ್ಸ್ಗೆ 85 ಸಾವಿರ ಡಾಲರ್ ಅಂದರೆ ಸುಮಾರು 75 ಲಕ್ಷ ರೂಪಾಯಿಗಳನ್ನು ಯಾರು ನಾಮಿನೇಟ್ ಮಾಡಿರುತ್ತಾರೋ ಅವರು ನೀಡಲಿದ್ದಾರೆ.