ಬೆಂಗಳೂರು: ಮೈಸೂರಿನ ಕೆಸರೆ ಗ್ರಾಮದ ಜಮೀನಿಗೆ ಸಂಬಂಧಪಟ್ಟಂತೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮುಡಾದಲ್ಲಿ ನಡೆದಿದೆ ಎನ್ನಲಾದ ಹಗರಣದ ಆರೋಪದಿಂದ ಸಿಎಂ ಸಿದ್ದರಾಮಯ್ಯ ಬಚಾವಾಗಿದ್ದಾರೆ. ಹಗರಣದ ತನಿಖೆ ನಡೆಸಿರುವ ಲೋಕಾಯುಕ್ತ ಪೊಲೀಸರು ಸಿದ್ದರಾಮಯ್ಯಗೆ ಕ್ಲೀನ್ಚಿಟ್ ನೀಡಿದ್ದಾರೆ.
ಆದರೆ ಇದೀಗ ಸಿಬಿಐ ತನಿಖೆ ಕೋರಿ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಮೇಲ್ಮನವಿ ಅರ್ಜಿ ಸಲ್ಲಿಸಿದ್ದು, ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ಇಂದು ಮೇಲ್ಮನವಿ ಅರ್ಜಿ ವಿಚಾರಣೆ ನಡೆಯಿತು. ಸಿದ್ದರಾಮಯ್ಯ ಪತ್ನಿಗೆ ನೋಟಿಸ್ ಜಾರಿಯಾಗದ ಹಿನ್ನೆಲೆಯಲ್ಲಿ ಸಿಎಂ ಪತ್ನಿಗೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್ ಆದೇಶ ನೀಡಿದೆ.
ವಿಚಾರಣೆವೇಳೆ ಸಿಬಿಐ ತನಿಖೆ ಕೋರಿ ಸ್ನೇಹಮಯಿ ಕೃಷ್ಣ ಸಲ್ಲಿಸಿರುವ ಮೇಲ್ಮನವಿ ಅರ್ಜಿಯಲ್ಲಿ ಬಿ ಎಂ ಪಾರ್ವತಿ ಅವರಿಗೆ ನೋಟಿಸ್ ಜಾರಿಯಾಗಿಲ್ಲ. ಜತೆಗೆ, ರಾಜ್ಯಪಾಲರ ಆದೇಶ ಎತ್ತಿ ಹಿಡಿಯುವಾಗ ಏಕಸದಸ್ಯ ಪೀಠದ ಅಭಿಪ್ರಾಯ ವ್ಯಕ್ತಪಡಿಸುವ ಮೂಲಕ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣ ಎದುರಿಸುವಂತೆ ಮಾಡಿರುವ ಆದೇಶ ಬದಿಗೆ ಸರಿಸಲು ಕೋರಿ ಜೆ ದೇವರಾಜು ಸಲ್ಲಿಸಿರುವ ಮೇಲ್ಮನವಿಯಲ್ಲಿ ಪಾರ್ವತಿ, ಮಲ್ಲಿಕಾರ್ಜುನ ಸ್ವಾಮಿ,
ಪೊಲೀಸ್ ಮಹಾನಿರ್ದೇಶಕರು ಹಾಗೂ ಮೈಸೂರಿನ ವಿಜಯನಗರ ಠಾಣಾಧಿಕಾರಿಗೆ ನೋಟಿಸ್ ಜಾರಿಯಾಗಿಲ್ಲ. ಹೀಗಾಗಿ, ಎಲ್ಲರಿಗೂ ನೋಟಿಸ್ ಮತ್ತು ಹ್ಯಾಂಡ್ ಸಮನ್ಸ್ ಜಾರಿ ಮಾಡುವಂತೆ ನಿರ್ದೇಶಿಸಿದ ನ್ಯಾಯಾಲಯವು, ವಿಚಾರಣೆಯನ್ನು ಸೆಪ್ಟೆಂಬರ್ 4ಕ್ಕೆ ಮುಂದೂಡಿದೆ.