ವಿಜಯಸಾಕ್ಷಿ ಸುದ್ದಿ, ಗದಗ: ಶಿಕ್ಷಕರ ಬದುಕು ಆದರ್ಶಮಯವಾಗಿದ್ದು, ಉತ್ತಮ ಶಿಕ್ಷಕರು ವಿದ್ಯಾರ್ಥಿಗಳ ಬದುಕಿನ ದಾರಿದೀಪವಾಗಿ ತಾವು ಎಂದೆಂದಿಗೂ ಗೌರವ ಪಡೆಯುವವರು. ಬಿ.ಜಿ. ಅಣ್ಣಿಗೇರಿ ಗುರುಗಳ ಶಿಷ್ಯ ಬಳಗವು ಉತ್ತಮ ಕಾರ್ಯಕ್ಕೆ ಅಡಿ ಇಟ್ಟಿದ್ದು, ಇದು ನಿರಂತರವಾಗಿ ಜನಮಾನಸದಲ್ಲಿ ಉಳಿಯುತ್ತದೆ ಎಂದು ಗದಗ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ವ್ಹಿ. ಶೆಟ್ಟೆಪ್ಪನವರ ಹೇಳಿದರು.
ಅವರು ಬುಧವಾರ ಗದುಗಿನ ರಾಜೀವ ಗಾಂಧಿ ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಶ್ರೀ ಬಿ.ಜಿ. ಅಣ್ಣಿಗೇರಿ ಗುರುಗಳ ಪ್ರತಿಭಾ ಪ್ರತಿಷ್ಠಾನದಿಂದ ಎಸ್.ಎಸ್.ಎಲ್.ಸಿಯಲ್ಲಿ ಮೊದಲ 5 ಸ್ಥಾನಗಳನ್ನು ಪಡೆದುಕೊಂಡ ಗದಗ ತಾಲೂಕಿನ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಮಾತನಾಡಿದರು.
ಉತ್ತಮ ಶಿಕ್ಷಕರು ವಿದ್ಯಾರ್ಥಿಗಳೊಂದಿಗೆ ಆತ್ಮೀಯತೆ ಹೊಂದಿ ವಿವಿಧ ಬೋಧನಾ ಕೌಶಲ್ಯಗಳನ್ನು ಅಳವಡಿಸಿಕೊಂಡು ಮಕ್ಕಳ ಕಲಿಕೆಯನ್ನು ಅಭಿವೃದ್ಧಿಗೊಳಿಸುತ್ತಾರೆ. ಇಂದು ಪುರಸ್ಕಾರ ಪಡೆದ ಮಕ್ಕಳು ಪ್ರತಿಭಾನ್ವಿತರಾಗಲು ನಮ್ಮ ಶಿಕ್ಷಕ ಬಳಗ ಹಾಗೂ ಕುಟುಂಬವೂ ಸಹ ಕಾರಣವಾಗಿದೆ ಎಂದರಲ್ಲದೆ, ಮಕ್ಕಳ ಪ್ರತಿಭೆಗೆ ಪುರಸ್ಕಾರ ನೀಡಿ ಪ್ರೋತ್ಸಾಹಿಸುತ್ತಿರುವ ಪ್ರತಿಷ್ಠಾನವನ್ನು ಅಭಿನಂದಿಸಿದರು.
ಇನ್ನೋರ್ವ ಮುಖ್ಯ ಅತಿಥಿ, ಡಾ.ರಾಜಶೇಖರ ಪವಾಡಶೆಟ್ಟರ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಸಿಕ್ಕ ಅವಕಾಶಗಳನ್ನು, ಕೌಶಲ್ಯಗಳನ್ನು ಸದುಪಯೋಗ ಮಾಡಿಕೊಳ್ಳಬೇಕು. ಸಂಸ್ಕೃತಿ ಸಂಸ್ಕಾರಗಳನ್ನು ಅಳವಡಿಸಿಕೊಂಡು ಪ್ರಾಮಾಣಿಕತೆಯಿಂದ ಪ್ರಯತ್ನಶೀಲರಾಗಿ ಅಭ್ಯಾಸ ಮಾಡಬೇಕು. ದುಶ್ಚಟಗಳನ್ನು ದೂರವಿಟ್ಟು ನಿರಂತರ ಅಭ್ಯಾಸ ಮಾಡಿ ಜೀವನದಲ್ಲಿ ಯಶಸ್ಸು ಸಾಧಿಸಬೇಕು ಎಂದರು.
ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಸರಸ್ವತಿ ವಿಭೂತಿ, ಅಣ್ಣಕ್ಕ ವಿಭೂತಿ, ಮಂಜುಳಾ ಹಡಪದ, ದರ್ಶನ ತಳಗಡೆ, ಯಶೋಧಾ ಢಕ್ಕಣ್ಣವರ ಅವರಿಗೆ ನಗದು ಪುರಸ್ಕಾರದ ಚೆಕ್, ಪ್ರಮಾಣಪತ್ರ ನೀಡಿ ಗೌರವಿಸಲಾಯಿತು.
ಅಧ್ಯಕ್ಷತೆಯನ್ನು ಎಸ್.ಬಿ. ಬಾಗೇವಾಡಿ ವಹಿಸಿದ್ದರು. ಪ್ರತಿಷ್ಠಾನದ ಅಧ್ಯಕ್ಷ ಶಿವಕುಮಾರ ಪಾಟೀಲ ಬಿ.ಜಿ. ಅಣ್ಣಿಗೇರಿ ಅವರ ಬದುಕು, ಸೇವೆಯನ್ನು ಬಣ್ಣಿಸಿ ಪ್ರತಿಷ್ಠಾನದ ಕಾರ್ಯವೈಖರಿಯನ್ನು ವಿವರಿಸಿದರು. ಪ್ರತಿಷ್ಠಾನದ ಕಾರ್ಯದರ್ಶಿ ಸುಭಾಶ್ಚಂದ್ರ ಬೆಟ್ಟದೂರ, ಸಂಯೋಜಕರಾದ ಭಾರತಿ ಶಿವಕುಮಾರ ಪಾಟೀಲ, ನೇಹಾ, ಸುಧಾರಾಣಿ, ಪ್ರಸನ್ ಮುಂತಾದವರಿದ್ದರು. ಎಲ್.ಬಿ. ಕಾಲವಾಡ ಸ್ವಾಗತಿಸಿದರು. ವೈ.ಎಸ್. ಬಮ್ಮನಾಳ ನಿರೂಪಿಸಿದರು. ಕೊನೆಗೆ ವಿಜಯಲಕ್ಷ್ಮೀ ಚೂರಿ ವಂದಿಸಿದರು.
ಎಸ್‌ಎಂಕೆ ನಗರದಲ್ಲಿ: ಗದುಗಿನ ಎಸ್.ಎಂ. ಕೃಷ್ಣಾ ನಗರದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ವರ್ಷಾ ಗುಂಜಾಳ, ನಾಜೀಯಾ ಅಂಗಡಿ, ಜಗದೀಶ ಭಜಂತ್ರಿ, ವಿಜಯಲಕ್ಷ್ಮೀ ಸುಣಗಾರ, ಕಾರ್ತಿಕ ಮುನವಳ್ಳಿ ಅವರಿಗೆ ನಗದು ಪುರಸ್ಕಾರದ ಚೆಕ್, ಪ್ರಮಾಣಪತ್ರ ನೀಡಿ ಗೌರವಿಸಲಾಯಿತು. ಅಧ್ಯಕ್ಷತೆಯನ್ನು ಎಸ್.ಸಿ. ನಾಗರಳ್ಳಿ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಡಾ. ಆರ್.ಟಿ. ಪವಾಡಶೆಟ್ಟರ ಆಗಮಿಸಿದ್ದರು. ವೇದಿಕೆಯಲ್ಲಿ ಪ್ರತಿಷ್ಠಾನದ ಪದಾಧಿಕಾರಿಗಳಿದ್ದರು. ಎಸ್.ಎಸ್. ಗೌಡರ ಸ್ವಾಗತಿಸಿ ವಂದಿಸಿದರು.
ಗಾಂಧಿ ನಗರದಲ್ಲಿ: ಬೆಟಗೇರಿಯ ಗಾಂಧಿ ನಗರದ ಸರ್ಕಾರಿ ಪ್ರೌಢಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಪ್ರಿಯಾಂಕ ಜೋಗಿ, ವರುಣಕುಮಾರ ಹೊಟ್ಟಿ, ಪರಶುರಾಮ ಸಕ್ರಗೌಡ ಅವರಿಗೆ ನಗದು ಪುರಸ್ಕಾರದ ಚೆಕ್, ಪ್ರಮಾಣಪತ್ರ ನೀಡಿ ಗೌರವಿಸಲಾಯಿತು. ಅಧ್ಯಕ್ಷತೆಯನ್ನು ಎಂ.ಶಾರದಾ ವಹಿಸಿದ್ದರು. ವೇದಿಕೆಯಲ್ಲಿ ಪ್ರತಿಷ್ಠಾನದ ಪದಾಧಿಕಾರಿಗಳಿದ್ದರು. ಜ್ಯೋತಿ ಅಂಗಡಿ ನಿರೂಪಿಸಿದರು. ಶಾಲಿನಿ ಮೇರವಾಡೆ ವಂದಿಸಿದರು.