ಗುರುವೆಂದರೆ ವ್ಯಕ್ತಿಯಲ್ಲ, ಮಹಾನ್ ಶಕ್ತಿ

0
oplus_2
Spread the love

ವಿಜಯಸಾಕ್ಷಿ ಸುದ್ದಿ, ಬಾಳೆಹೊನ್ನೂರು: ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಅಗ್ರ ಸ್ಥಾನವಿದೆ. ಗುರುವನ್ನು ಬ್ರಹ್ಮ, ವಿಷ್ಣು, ಮಹೇಶ್ವರ ಸ್ವರೂಪರೆಂದು ಭಾವಿಸುತ್ತಾರೆ. ಬದುಕನ್ನು ಅರಳಿಸುವ ಪಸರಿಸುವ ಮತ್ತು ದುಷ್ಟತನ ಅಳಿಸುವ ಶಕ್ತಿ ಗುರುವಿಗಿದೆ. ಅಜ್ಞಾನ ಕಳೆದು ಸುಜ್ಞಾನದ ಅರಿವನ್ನು ತುಂಬುವವನೇ ನಿಜವಾದ ಗುರುವೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

Advertisement

ಅವರು ಗುರುವಾರ ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ಗುರುಪೂರ್ಣಿಮಾ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಗುರುವೆಂದರೆ ವ್ಯಕ್ತಿಯಲ್ಲ. ಅದೊಂದು ಮಹಾನ್ ಶಕ್ತಿ. ಜ್ಞಾನ ನೀಡಿ ಸನ್ಮಾರ್ಗದಲ್ಲಿ ನಡೆಸುವವನೇ ಗುರು ಎಂಬ ನಂಬಿಕೆಯಿದೆ. ಅಜ್ಞಾನ, ಅಹಂಕಾರ, ಅಂಧಕಾರ ಅಳಿಸಿ ಸುಜ್ಞಾನ ಜ್ಯೋತಿಯಾಗಿ ಬಾಳು ಬೆಳಗಿಸುವಾತನೇ ಗುರು ಎಂದು ಶಾಸ್ತ್ರ ಸಾರುತ್ತದೆ. ಆಷಾಢ ಮಾಸದಲ್ಲಿ ಬರುವ ಹುಣ್ಣಿಮೆಯನ್ನು ಗುರು ಪೂರ್ಣಿಮಾ ಎಂತಲೂ, ವ್ಯಾಸರು ಹುಣ್ಣಿಮೆಯಂದೇ ಜನ್ಮ ತಾಳಿರುವ ಕಾರಣ ವ್ಯಾಸ ಪೂರ್ಣಿಮಾ ಎಂತಲೂ ಕರೆಯುತ್ತಾರೆ. ಮುಂದೆ ಗುರಿ, ಹಿಂದೆ ಒಬ್ಬ ಗುರುವಿನ ಕಾರುಣ್ಯ ಪ್ರತಿಯೊಬ್ಬರಿಗೂ ಬೇಕು ಎಂದರು.

ಗುರು ಪೂರ್ಣಿಮಾ ಅಂಗವಾಗಿ ಕ್ಷೇತ್ರದ ಎಲ್ಲ ದೈವಗಳಿಗೆ ವಿಶೇಷ ಪೂಜೆ ಜರುಗಿತು. ಈ ಪವಿತ್ರ ಸಮಾರಂಭದಲ್ಲಿ ಲಿಂಗದಹಳ್ಳಿ, ಮಳಲಿ, ಸಂಗೊಳ್ಳಿ, ಬಿಳಕಿ, ಬೇರುಗಂಡಿ, ನೆಗಳೂರು, ಕಾರ್ಜುವಳ್ಳಿ, ಮಳಖೇಡ, ದೊಡ್ಡಸಗರ, ಹುಡಗಿ, ಗುಂಡಪಲ್ಲಿ ಮಠಗಳ ಶಿವಾಚಾರ್ಯರು ಹಾಗೂ ಹುಬ್ಬಳ್ಳಿಯ ಆರ್.ಎಂ. ಹಿರೇಮಠ, ಸೋಲಾಪುರದ ರಾಜು, ನಾಂದೇಡದ ವಿನಾಯಕ, ಹೂವಿನಮಡಲು ಹಾಲಸ್ವಾಮಿ, ಶಿವಮೊಗ್ಗದ ಟಿ.ವಿ. ಶಿವಕುಮಾರ್, ಕೊಡಿಯಾಲ ಹೊಸಪೇಟೆ ಗಿರೀಶ್, ಚಿಕ್ಕಮಗಳೂರು ಪ್ರಭುಲಿಂಗಶಾಸ್ತಿç ಸೇರಿದಂತೆ ಲಿಂಗದಹಳ್ಳಿ ದೊಡ್ಡಸಗರ ಸದ್ಭಕ್ತರು ಪಾಲ್ಗೊಂಡು ಜಗದ್ಗುರುಗಳವರ ಪಾದ ಪೂಜಾ ನೆರವೇರಿಸಿ ಆಶೀರ್ವಾದ ಪಡೆದರು.

ಬಂದ ಎಲ್ಲ ಭಕ್ತರಿಗೂ ಅನ್ನ ದಾಸೋಹವನ್ನು ರಾಣೆಬೆನ್ನೂರು ತಾಲೂಕಿನ ಕೊಡಿಯಾಲ ಹೊಸಪೇಟೆ ಜುಂಜಪ್ಪ ಹೆಗ್ಗಪ್ಪನವರ ಮಕ್ಕಳು ನೆರವೇರಿಸಿದರು.

ಪಾಪ ಕಾರ್ಯಕ್ಕೆ ಮನಸ್ಸು ಹೋಗದಂತೆ, ಪುಣ್ಯ ಕಾರ್ಯದಲ್ಲಿ ಮನಸ್ಸು ಬೆಳೆಯುವಂತೆ ಉತ್ತಮ ಸ್ಫೂರ್ತಿ ನೀಡಿ ಮುಕ್ತಿ ಮಾರ್ಗ ತೋರುವ ಗುರುವನ್ನು ಪಡೆದು ಜೀವನ ಸಾರ್ಥಕಪಡಿಸಿಕೊಳ್ಳಬೇಕಾಗಿದೆ. ಆಷಾಢ ಮಾಸದಲ್ಲಿ ಬರುವ ಗುರು ಪೂರ್ಣಿಮಾ ದಿನದಂದು ಶಿವನು ಯೋಗ ವಿದ್ಯೆಯನ್ನು ಸಪ್ತ ಮಹರ್ಷಿಗಳಿಗೆ ಅರುಹಿ ಮೊದಲ ಗುರುವಾದನು ಎಂಬ ನಂಬಿಕೆಯಿದೆ. ಏಳಿ ಎದ್ದೇಳಿ, ಗುರಿ ಮುಟ್ಟುವವರೆಗೂ ನಿಲ್ಲಬೇಡಿ ಎಂಬ ವಿವೇಕಾನಂದರ ವಾಣಿಯಂತೆ ಜಾಗೃತರಾಗಿ ಶ್ರೇಷ್ಠ ಗುರುವನ್ನು ಪಡೆದು ಭವ ಬಂಧನದಿಂದ ಮುಕ್ತರಾಗಬೇಕೆಂದು ರಂಭಾಪುರಿ ಶ್ರೀಗಳು ನುಡಿದರು.


Spread the love

LEAVE A REPLY

Please enter your comment!
Please enter your name here