ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ನರೇಗಲ್ಲ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸರಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿಗಳ ಅನುಷ್ಠಾನವು ಶೇ. 98ರಷ್ಟಾಗಿರುವುದು ಹೆಮ್ಮೆಯ ಸಂಗತಿ ಎಂದು ಗಜೇಂದ್ರಗಡ ತಾಲೂಕಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶರಣಪ್ಪ ಬೆಟಗೇರಿ ಹೇಳಿದರು.
ಪ.ಪಂ ಸಭಾಭವನದಲ್ಲಿ ಜರುಗಿದ ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿಯ ಸಭೆಯಲ್ಲಿ ಪ್ರಗತಿ ಪರಿಶೀಲನೆ ಮಾಡಿ ಅವರು ಮಾತನಾಡಿದರು.
ಶಾಸಕರಾದ ಜಿ.ಎಸ್. ಪಾಟೀಲರ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ತಾಲೂಕಿನಾದ್ಯಂತ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಯಶಸ್ವಿಯಾಗಿದೆ. ಅದರಲ್ಲಿಯೂ ನರೇಗಲ್ಲ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಈ ಯೋಜನೆ ಇಷ್ಟೊಂದು ಯಶಸ್ವಿಯಾಗಲು ಅಂಗನವಾಡಿ ಕಾರ್ಯಕರ್ತೆಯರು ಬಹುಮಟ್ಟಿಗೆ ಕಾರಣರಾಗಿದ್ದಾರೆ. ಅದಕ್ಕಾಗಿ ಅವರನ್ನು ಸಮಿತಿ ವತಿಯಿಂದ ಅಭಿನಂದಿಸುವುದಾಗಿ ತಿಳಿಸಿದರು.
ಈ ಯೋಜನೆ ತಲುಪದವರು ಪಟ್ಟಣ ಪಂಚಾಯಿತಿ, ಗ್ಯಾರಂಟಿ ಸಮಿತಿಯ ಸದಸ್ಯರನ್ನಾಗಲಿ ಸಂಪರ್ಕಿಸಬೇಕು. ಗೃಹಜ್ಯೋತಿ ಯೋಜನೆಯು ಶೇ. 99.99ರಷ್ಟು ಯಶಸ್ವಿಯಾಗಿದ್ದು, ಇನ್ನು ಯಾರಾದರೂ ಉಳಿದಿದ್ದರೆ ಅಂಥವರು ದಾಖಲೆಗಳೊಂದಿಗೆ ಸಮಿತಿಯ ಸದಸ್ಯರನ್ನು ತಕ್ಷಣವೆ ಸಂಪರ್ಕಿಸಬೇಕು. ಸಮಿತಿಯ ಸದಸ್ಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಉಳಿದ ಫಲಾನುಭವಿಗಳಿಗೆ ಯೋಜನೆಯನ್ನು ತಲುಪಿಸಲು ಮನೆಮನೆ ಸಮೀಕ್ಷೆಯನ್ನು ಮಾಡಿ ಶೇ. 100ರಷ್ಟು ಯಶಸ್ವಿ ಮಾಡಲು ಶ್ರಮಿಸಬೇಕೆಂದರು.
ಜಿಲ್ಲಾ ಗ್ಯಾರಂಟಿ ಸಮಿತಿ ಸದಸ್ಯ ಶಿವನಗೌಡ ಪಾಟೀಲ, ಪ.ಪಂ ಉಪಾಧ್ಯಕ್ಷ ಕುಮಾರಸ್ವಾಮಿ ಕೋರಧಾನ್ಯಮಠ ಸಭೆಯನ್ನುದ್ದೇಶಿಸಿ ಮಾತನಾಡಿದರು. ಸಭೆಯಲ್ಲಿ ಪ.ಪಂ ಸದಸ್ಯರು, ನಾಮನಿರ್ದೇಶಿತ ಸದಸ್ಯರು, ಗ್ಯಾರಂಟಿ ಸಮಿತಿ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು. ಸ್ಥಾಯಿ ಸಮಿತಿ ಅಧ್ಯಕ್ಷ ಮುತ್ತಪ್ಪ ನೂಲ್ಕಿ ಉಪಸ್ಥಿತರಿದ್ದರು. ಪ.ಪಂ ಅಧ್ಯಕ್ಷ ಫಕೀರಪ್ಪ ಮಳ್ಳಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಾಧಿಕಾರಿ ಮಹೇಶ ನಿಡಶೇಶಿ ಸ್ವಾಗತಿಸಿದರು.
ಅಂಗನವಾಡಿ ಮೇಲ್ವಿಚಾರಕಿ ರಾಧಿಕಾ ಪವಾರ ಮಾಹಿತಿ ನೀಡಿ, ಪಟ್ಟಣದ 6ನೇ ವಾರ್ಡಿನಲ್ಲಿ ಇನ್ನೂ 44 ಫಲಾನುಭವಿಗಳು ಯೋಜನೆಯ ಲಾಭ ಪಡೆದಿಲ್ಲ. ಇದಕ್ಕೆ ಹಲವಾರು ತಾಂತ್ರಿಕ ಕಾರಣಗಳಿದ್ದು, ಇನ್ನು ಕೆಲವೇ ದಿನಗಳಲ್ಲಿ ಅದೆಲ್ಲವನ್ನೂ ಸರಿಪಡಿಸಿ ಅವರಿಗೂ ಯೋಜನೆಯ ಲಾಭ ತಲುಪಿಸಲಾಗುವುದೆಂದರು.



