ವಿಜಯಸಾಕ್ಷಿ ಸುದ್ದಿ, ರೋಣ: ಕಳೆದ 6 ತಿಂಗಳ ಬಾಕಿ ವೇತನವನ್ನು ಪಾವತಿಸುವಂತೆ ಒತ್ತಾಯಿಸಿ ನರೇಗಾ ನೌಕರರು ಹಮ್ಮಿಕೊಂಡಿರುವ 4ನೇ ದಿನದ ಅಸಹಕಾರ ಚಳುವಳಿಯ ಸ್ಥಳಕ್ಕೆ ರೋಣ ತಾ.ಪಂ ಕಾರ್ಯ ನಿರ್ವಾಹಕ ಅಧಿಕಾರಿ ಚಂದ್ರಶೇಖರ ಕಂದಕೂರ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಅವರು ಮಾತನಾಡಿ, ವೇತನವಿಲ್ಲದೆ ಜೀವನ ನಡೆಸುವುದು ಬಹಳ ಕಷ್ಟಕರವಾದ ಸನ್ನಿವೇಶ. ಉದ್ಯೋಗ ಖಾತ್ರಿ ಯೋಜನೆಯನ್ನು ಅನುಷ್ಠಾನಗೊಳಿಸುವ ನೀವು ಈ ರೀತಿ ವೇತನಕ್ಕಾಗಿ ಮುಷ್ಕರ ಹಮ್ಮಿಕೊಳ್ಳುವಂತೆ ಆಗಬಾರದಿತ್ತು. ಇದು ರಾಜ್ಯಮಟ್ಟದ ತಾಂತ್ರಿಕ ಸಮಸ್ಯೆ ಆಗಿರುವುದರಿಂದ ಹೀಗಾಗಿದೆ. ಆಯುಕ್ತಾಲಯದಿಂದ ವೇತನ ಪಾವತಿಗೆ ಕ್ರಮ ವಹಿಸಲಾಗುತ್ತಿದೆ. ಆದಷ್ಟು ಬೇಗ ನಿಮ್ಮ ವೇತನ ಪಾವತಿಯಾಗಿ ಎಲ್ಲರೂ ಕೆಲಸಕ್ಕೆ ಮರಳುವಂತಾಗಲಿ ಎಂದರು.
ತಾ.ಪA ನರೇಗಾ ಆಡಳಿತ ಸಹಾಯಕ ಅರುಣ ಸಿಂಗ್ರಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ವೇತನವಿಲ್ಲದೇ ನರೇಗಾ ನೌಕರರು ಎದುರಿಸುತ್ತಿರುವ ಸಂಕಷ್ಟಗಳ ಬಗ್ಗೆ ವಿವರಿಸಿ, ನಮ್ಮ ಬದುಕು ಸದ್ಯ ಬೀದಿಗೆ ಬಂದಿದ್ದು, ಮಾನ್ಯರು ನಮ್ಮ ಬೇಡಿಕೆಯನ್ನು ಆಯುಕ್ತಾಲಯದ ಗಮನಕ್ಕೆ ತನ್ನಿ ಎಂದು ಹೇಳಿದರು.
ರೋಣ ತಾಲೂಕು ಪ್ರತಿನಿಧಿ ಶಾಂತಾ ತಿಮ್ಮರಡ್ಡಿ, ಬಿ.ಎಫ್.ಟಿ ಸಂಘದ ಗೌರವ ಅಧ್ಯಕ್ಷ ಅಶೋಕ ಕಂಬಳಿ, ಗ್ರಾಮ ಕಾಯಕ ಮಿತ್ರ ಪವಿತ್ರಾ ನಾಡಗೌಡ್ರ ಮಾತನಾಡಿದರು.
ನರೇಗಾ ಸಿಬ್ಬಂದಿಗಳಾದ ಅರುಣಕುಮಾರ ತಂಬ್ರಳ್ಳಿ, ವಸಂತ ಅನ್ವರಿ, ಪರಶುರಾಮ ಜಕ್ಕಣ್ಣವರ, ಮಲ್ಲಪ್ಪ ಕಟ್ಟಿಮನಿ, ಉಮೇಶ ಜಕ್ಕಲಿ, ರೇಷ್ಮಾ ಕೆಲೂರ, ಗುರು ಹಿರೇಮಠ, ಮಂಜುಳಾ ಪಾಟೀಲ, ಯಲ್ಲಪ್ಪ ಗೊರವರ, ಪ್ರಕಾಶ್ ಅಂಬಕ್ಕಿ, ಪ್ರಕಾಶ್ ತಳವಾರ, ಈರಣ್ಣ ಬೇಲೇರಿ, ವೀರಣ್ಣ ದಳವಾಯಿ, ಮೌನೇಶ್ ದಂಡಿನ, ಸಿ.ಬಿ. ಮಲ್ಲಗೌಡ್ರ ಮುಂತಾದವರು ಉಪಸ್ಥಿತರಿದ್ದರು.