ವಿಜಯಸಾಕ್ಷಿ ಸುದ್ದಿ, ಗದಗ: ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಸರ್ಕಾರ ಹಲವು ಸೌಲಭ್ಯಗಳನ್ನು ನೀಡುವ ಮೂಲಕ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿ ಹಾಗೂ ಸರ್ಕಾರಿ ಶಾಲೆಗಳ ಬಲವರ್ಧನೆಗೆ ಮುಂದಾಗಿದ್ದು, ವಿದ್ಯಾರ್ಥಿಗಳು ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಳ್ಳಬೇಕೆಂದು ಡಿಡಿಪಿಐ ಆರ್.ಎಸ್. ಬುರಡಿ ಹೇಳಿದರು.
ಅವರು ಗುರುವಾರ ಗದುಗಿನ ಸಿದ್ಧಲಿಂಗ ನಗರದ ಸರ್ಕಾರಿಪ್ರೌಢ ಶಾಲೆಯಲ್ಲಿ ಬಿ.ಜಿ. ಅಣ್ಣಿಗೇರಿ ಗುರುಗಳ ಪ್ರತಿಭಾ ಪ್ರತಿಷ್ಠಾನದಿಂದ ಎಸ್.ಎಸ್.ಎಲ್.ಸಿಯಲ್ಲಿ ಮೊದಲ 5 ಸ್ಥಾನ ಪಡೆದುಕೊಂಡ ಗದಗ ತಾಲೂಕಿನ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡುವದು, ದುಶ್ಚಟಗಳನ್ನು ರೂಢಿಸಿಕೊಳ್ಳುವದು ಸಲ್ಲದು. ಹಾಗೆಯೇ ಟಿವಿ ಮತ್ತು ಮೊಬೈಲ್‌ಗಳನ್ನು ಅಗತ್ಯವಿದ್ದರೆ ಮಾತ್ರ ಬಳಕೆ ಮಾಡಬೇಕು. ಜ್ಞಾನಾರ್ಜನೆಗೆ, ಸಂಪರ್ಕಕ್ಕೆ ಅಗತ್ಯಕ್ಕೆ ತಕ್ಕಂತೆ ಉಪಯೋಗಿಸಬೇಕು ಎಂದರು.
ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಸ್ಪೂರ್ತಿ ಉಡಚಗೊಂಡ, ಲಕ್ಷ್ಮೀ ನಲುಡಿ, ಕೀರ್ತಿ ನಾಯ್ಕರ್, ಶಾಕಾಂಬರಿ ನರೇಗಲ್ಲ, ಜ್ಯೋತಿ ಹೇಮಾದ್ರಿ ಅವರುಗಳಿಗೆ ಪ್ರತಿಭಾ ಪುರಸ್ಕಾರದ ಚೆಕ್, ಪ್ರಮಾಣ ಪತ್ರ, ಕಾಲೇಜು ಬ್ಯಾಗ್‌ಗಳನ್ನು ನೀಡಿ ಶಾಲೆಯ ಎಲ್ಲ ಮಕ್ಕಳಿಗೆ ಸಿಹಿ ವಿತರಿಸಿ ಶುಭ ಕೋರಲಾಯಿತು.
ಪ್ರತಿಷ್ಠಾನದ ಅಧ್ಯಕ್ಷ ಶಿವಕುಮಾರ ಎಚ್.ಪಾಟೀಲ ಪ್ರತಿಷ್ಠಾನದ ಕಾರ್ಯಚಟುವಟಿಕೆಗಳನ್ನು ವಿವರಿಸಿದರು. ಪ್ರತಿಷ್ಠಾನದ ಕಾರ್ಯದರ್ಶಿ ಸುಭಾಸಚಂದ್ರ ಬೆಟದೂರ, ಖಜಾಂಚಿ ವಿಜಯಲಕ್ಷ್ಮೀ ಅಂಗಡಿ, ನಿರ್ದೆಶಕರಾದ ಡಾ. ಶರಣಬಸವ ಚೌಕಿಮಠ, ಡಾ. ಬಸಯ್ಯ ಬೆಳ್ಳೇರಿಮಠ, ಶಿವಪ್ಪ ಕತ್ತಿ, ಆಂಜನೇಯ ಕಟಗಿ, ಸಿದ್ಧಲಿಂಗನಗೌಡ ಪಾಟೀಲ, ಡಾ. ಬಸವರಾಜ ಚನ್ನಪ್ಪಗೌಡ್ರ, ಭಾರತಿ ಪಾಟೀಲ, ನೇಹಾ, ಸುಧಾರಾಣಿ, ಪ್ರಸನ್‌ಕುಮಾರ ಗುತ್ತಿ ಮುಂತಾದವರು ಪಾಲ್ಗೊಂಡಿದ್ದರು.
ಅಧ್ಯಕ್ಷತೆಯನ್ನು ಜೆ.ಬಿ. ಅಣ್ಣಿಗೇರಿ ವಹಿಸಿದ್ದರು. ಗಂಗಾ ಅಳವಡಿ ಸ್ವಾಗತಿಸಿದರು. ಎಸ್.ಎ. ಬಾಣದ ನಿರೂಪಿಸಿ ವಂದಿಸಿದರು.
ಉರ್ದು ಶಾಲೆಯಲ್ಲಿ: ಗದುಗಿನ ಹಳೇ ಬಸ್ ನಿಲ್ದಾಣದ ಬಳಿಯಿರುವ ಸರ್ಕಾರಿ ಉರ್ದು ಪ್ರೌಢಶಾಲೆಯ ವಿದ್ಯಾರ್ಥಿಗಳಾದ ರೆಹಮತ್ ಉನ್ನಿಸಾ ಬೋದ್ಲೇಖಾನ್, ಅತೀಕಾ ಮಕಾನದಾರ, ಆಶಾ ಮಮ್ಮುನವರ, ಫಾಯಿಜಾ ಅಡವಿಸೋಮಾಪೂರ ಹಾಗೂ ಸುಹಾನ ಇಸ್ರಾರ್ ಬಬರ್ಚಿ ಅವರುಗಳಿಗೆ ಪ್ರತಿಭಾ ಪುರಸ್ಕಾರದ ಚೆಕ್, ಪ್ರಮಾಣ ಪತ್ರ, ಕಾಲೇಜು ಬ್ಯಾಗ್‌ಗಳನ್ನು ನೀಡಿ ಗೌರವಿಸಲಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ. ಪ್ಯಾರಅಲಿ ನೂರಾನಿ ದಂಪತಿಗಳು ವಿದ್ಯಾರ್ಥಿಗಳಿಗೆ ಹಿತೋಪದೇಶ ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಪ್ರತಿಷ್ಠಾನದ ಅಧ್ಯಕ್ಷ ಶಿವಕುಮಾರ ಎಚ್.ಪಾಟೀಲ ಮಾತನಾಡಿ, ಗುರುಗಳಾದ ಬಿ.ಜಿ. ಅಣ್ಣಿಗೇರಿ ಪ್ರತಿಷ್ಠಾನವು ಸರ್ಕಾರಿ ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಗೌರವಿಸುತ್ತಿರುವುದು ನಿಜವಾದ ಗುರುವಂದನೆಯಾಗಿದೆ ಎಂದರು.