ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯ ಸರ್ಕಾರದ ಮಹಾತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಶಕ್ತಿ ಯೋಜನೆಯೂ ಸಹ ಒಂದಾಗಿದೆ. ಶಕ್ತಿ ಯೋಜನೆಯನ್ನು 11-6-2023ರಿಂದ ಜಾರಿಗೊಳಿಸಿದ್ದು, ಅಂದಿನಿಂದ ರಾಜ್ಯದ ಎಲ್ಲ ಮಹಿಳೆಯರು, ವಿದ್ಯಾರ್ಥಿನಿಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಸೌಲಭ್ಯವನ್ನು ರಾಜ್ಯ ಸರ್ಕಾರ ಒದಗಿಸಿದೆ.
ಇದುವರೆಗೆ `ಶಕ್ತಿ’ ಯೋಜನೆಯ ಫಲಾನುಭವಿಗಳ ಸಂಖ್ಯೆ 500 ಕೋಟಿ ಗಡಿಯನ್ನು ದಾಟಿದೆ. ಶಕ್ತಿ ಯೋಜನೆಯಡಿಯಲ್ಲಿ ನಮ್ಮ ನಾಡಿನ 500 ಕೋಟಿ ಹೆಣ್ಣು ಮಕ್ಕಳು ರಾಜ್ಯದ ಎಲ್ಲಾ ಸರ್ಕಾರಿ ಸ್ವಾಮ್ಯದ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಿರುವ ಹೆಗ್ಗಳಿಕೆಯನ್ನು ಸರಳ ಹಾಗೂ ಸಂಭ್ರಮದಿಂದ ಆಚರಿಸುವುದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾ ಹಾಗೂ ತಾಲೂಕು ಸದಸ್ಯರ ಹಕ್ಕುಭಾದ್ಯವಾಗಿದೆ.
ಶಕ್ತಿ ಯೋಜನೆ ಅಡಿಯಲ್ಲಿ 500 ಕೋಟಿ ಫಲಾನುಭವಿಗಳು ಪ್ರಯಾಣಿಸಿರುವುದನ್ನು ಸಾಂಕೇತಿಕವಾಗಿ ಜುಲೈ 14ರಂದು ರಾಜ್ಯದ ಎಲ್ಲಾ ಜಿಲ್ಲೆಗಳ ಹಾಗೂ ತಾಲೂಕುಗಳ ಬಸ್ ಡಿಪೊ/ಬಸ್ ನಿಲ್ದಾಣ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಆಯಾ ಸಮಿತಿಯ ಸದಸ್ಯರುಗಳು ಒಂದು ಬಸ್ಸಿಗೆ ಪೂಜೆಯನ್ನು ಸಲ್ಲಿಸಿ, ಪ್ರಯಾಣಿಕರಿಗೆ ಸಿಹಿ ಹಂಚುವುದರೊಂದಿಗೆ ಆಚರಿಸಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಗದಗನ ಪಂ. ಪುಟ್ಟರಾಜ ಬಸ್ ನಿಲ್ದಾಣದಲ್ಲಿ ಜುಲೈ 14ರಂದು ಬೆಳಿಗ್ಗೆ 11 ಗಂಟೆಗೆ ಗದಗ ತಾಲೂಕು ಗ್ಯಾರಂಟಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಶೋಕ ಮಂದಾಲಿ ಬಸ್ಸಿಗೆ ಪೂಜೆ ನೆರವೇರಿಸಲಿದ್ದಾರೆ. ಸದರಿ ಕಾರ್ಯಕ್ರಮದಲ್ಲಿ ಗದಗ ತಾಲೂಕು ಗ್ಯಾರಂಟಿ ಪ್ರಾಧಿಕಾರದ ಉಪಾಧ್ಯಕ್ಷರು, ಸದಸ್ಯರು, ಗಣ್ಯರು, ಅಧಿಕಾರಿಗಳು ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.