ನಟ ಸಂಜಯ್ ದತ್ ಸಖತ್ ಬ್ಯುಸಿಯಾಗಿದ್ದಾರೆ. ಕೆಜಿಎಫ್ ಸಿನಿಮಾದ ಬಳಿಕ ಸಂಜಯ್ ದತ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬಾಲಿವುಡ್ನಿಂದ ದಕ್ಷಿಣ ಭಾರತದ ಸಿನಿಮಾಗಳತ್ತ ಮುಖ ಮಾಡಿರುವ ಸಂಜಯ್ ದತ್ ಇದೀಗ್ ತಾವು ನಟಿಸಿದ ಸಿನಿಮಾವೊಂದರ ಬಗ್ಗೆ ಬೇಸರ ಹೊರ ಹಾಕಿದ್ದಾರೆ.
2023ರಲ್ಲಿ ತೆರೆಕಂಡ ಲೋಕೇಶ್ ಕನಗರಾಜ್ ನಿರ್ದೇಶನದ ದಳಪತಿ ವಿಜಯ್ ನಟನೆಯ ಲಿಯೋ ಸಿನಿಮಾದಲ್ಲಿ ಸಂಜಯ್ ದತ್ ಆ್ಯಂಟನಿ ದಾಸ್ ಹೆಸರಿನ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರದ ಟ್ರೇಲರ್ ನೋಡಿದವರಿಗೆ ಈ ಪಾತ್ರದಲ್ಲಿ ಏನೋ ಇದೆ ಎಂದೇ ಭಾವಿಸಿದ್ದರು. ಆದರೆ, ಅದು ಸುಳ್ಳಾಗಿದೆ. ಈ ಪಾತ್ರ ಕಮಾಲ್ ಮಾಡುವಲ್ಲಿ ವಿಫಲವಾಯಿತು. ಎಲ್ಲರೂ ಲೋಕೇಶ್ನ ಬೈದರು. ಈಗ ಸಂಜಯ್ ದತ್ ಕೂಡ ಇದೇ ಕೆಲಸ ಮಾಡಿದ್ದಾರೆ.
ಚೆನ್ನೈನಲ್ಲಿ ನಡೆದ ಈವೆಂಟ್ ಒಂದರಲ್ಲಿ ಮಾತನಾಡಿದ ಸಂಜಯ್ ದಯ್, ‘ನನಗೆ ಲೋಕೇಶ್ ಮೇಲೆ ಸಿಟ್ಟಿದೆ. ನನಗೆ ದೊಡ್ಡ ಆಫರ್ ನೀಡಿಲ್ಲ. ಅವರು ನನ್ನನ್ನು ವೇಸ್ಟ್ ಮಾಡಿ ಬಿಟ್ಟರು’ ಎಂದು ಬೇಸರ ಹೊರ ಹಾಕಿದ್ದಾರೆ. ಇದನ್ನು ಹಲವರು ಒಪ್ಪಿಕೊಂಡಿದ್ದು ಸಂಜಯ್ ದತ್ ರಂತಹ ನಟನಿಗೆ ಆಂಟನಿ ದಾಸ್ ಪಾತ್ರ ನೀಡಿದ್ದಕ್ಕೆ ಹಲವರು ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನೂ ಸಂಜಯ್ ದತ್ ಸದ್ಯ ‘ಕೆಡಿ: ದಿ ಡೆವಿಲ್’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಜೋಗಿ ಪ್ರೇಮ್ ನಿರ್ದೇಶನದ ಈ ಸಿನಿಮಾದಲ್ಲಿ ಧ್ರುವ ಸರ್ಜಾ, ಶಿಲ್ಪಾ ಶೆಟ್ಟಿ, ರೀಷ್ಮಾ ನಾಣಯ್ಯ ಸೇರಿದಂತೆ ಹಲವರು ನಟಿಸುತ್ತಿದ್ದು ಸದ್ಯ ಚಿತ್ರತಂಡ ಪ್ರಮೋಷನ್ ಕೆಲಸದಲ್ಲಿ ತೊಡಗಿಕೊಂಡಿದೆ. ಇದರ ಜೊತೆಗೆ ಸಂಜಯ್ ದತ್ ‘ದಿ ರಾಜಾ ಸಾಬ್’ ಸಿನಿಮಾ ಹಾಗೂ ರಣವೀರ್ ಸಿಂಗ್ ನಟನೆಯ ‘ಧುರಂದರ್’ ಚಿತ್ರದಲ್ಲಿಯೂ ತೊಡಗಿಕೊಂಡಿದ್ದಾರೆ.