ಬೆಂಗಳೂರು: ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿ ಬ್ಯಾನ್ ಆಗಿದ್ದೇ ಆಗಿದ್ದು, ಈ ಅಗ್ರಿಗೇಟರ್ ಕಂಪನಿಗಳು ಮತ್ತು ಆಟೋ ಚಾಲಕರು ಪ್ರಯಾಣಿಕರಿಂದ ಮನಸೋ ಇಚ್ಛೆ ದರ ವಸೂಲಿಗೆ ಮುಂದಾಗಿದ್ದರು. ಇದಕ್ಕೆ ಬ್ರೇಕ್ ಹಾಕಲು ಆರ್ಟಿಒ ಅಧಿಕಾರಿಗಳು ಮುಂದಾಗಿದ್ದು, ಭರ್ಜರಿ ಕಾರ್ಯಾಚರಣೆ ನಡೆಸಿ ಕಳೆದೊಂದು ವಾರದಲ್ಲೇ ಸಾವಿರಕ್ಕೂ ಹೆಚ್ಚು ಆಟೋಗಳಿಗೆ ಶಾಕ್ ನೀಡಿದೆ.
ಕಳೆದ ಒಂದು ವಾರದಿಂದ ನಗರದ 11 ಆರ್‌ಟಿಓ ಕಚೇರಿ ವ್ಯಾಪ್ತಿಯಲ್ಲಿ 20 ತಂಡಗಳನ್ನ ರಚಿಸಿ ಸಾರಿಗೆ ಅಧಿಕಾರಿಗಳು ನಗರದಾದ್ಯಂತ ಕಾರ್ಯಚರಣೆ ಕೈಗೊಂಡಿದ್ದಾರೆ. ಈ ವೇಳೆ ಒಟ್ಟು 3,531 ಆಟೋಗಳನ್ನ ತಪಾಸಣೆ ನಡೆಸಿದ್ದು, ಅದರಲ್ಲಿ ಪರ್ಮೀಟ್, ದುಪ್ಪಟ್ಟು ದರ ವಸೂಲಿ ಇನ್ಶೂರೆನ್ಸ್, ಡಾಕ್ಯುಮೆಂಟ್‌ಗಳಿಲ್ಲದ 1,006 ವಾಹನಗಳ ವಿರುದ್ಧ ಕೇಸ್ ದಾಖಲಿಸಿ, 233 ಆಟೋಗಳನ್ನ ಸೀಜ್ ಮಾಡಿದ್ದಾರೆ.
ಆಟೋಗಳ ಪೈಕಿ ಅತಿ ಹೆಚ್ಚು ಆಟೋಗಳು ಆ್ಯಪ್ ಆಧಾರಿತ ಸಂಚಾರ ಮಾಡುತ್ತಿದ್ದ ಆಟೋಗಳೇ. ನಗರವ್ಯಾಪಿ ಆ್ಯಪ್ ಆಧಾರಿತ ಆಟೋಗಳ ಮೇಲೆಯೇ ಅತಿ ಹೆಚ್ಚು ದೂರಗಳಿದ್ದು, ಅದರಂತೆ ಆಯಾ ವ್ಯಾಪ್ತಿಯಲ್ಲಿ ಹೆಚ್ಚುವರಿ ದರ ಪಡೆದು ಸಂಚಾರ ಮಾಡುತ್ತಿದ್ದ ಆ್ಯಪ್ ಆಧಾರಿತ ಆಟೋಗಳಿಗೂ ಆರ್‌ಟಿಓ ಬಿಸಿ ಮುಟ್ಟಿಸಿದೆ.