ಬೆಂಗಳೂರು ಗ್ರಾಮಾಂತರ: ಇತ್ತಿಚೆಗೆ ರಾಜ್ಯದಲ್ಲಿ ಕ್ಷುಲಕ ವಿಚಾರಕ್ಕೆ ಹೊಡೆದಾಟ, ಕೊಲೆಗಳು ಹೀಗೆ ಹಲವಾರು ಘಟನೆಗಳು ನಡೆಯುತ್ತಲೇ ಇವೆ. ಇದೀಗ ಅಂತಹದ್ದೇ ಘಟನೆಯೊಂದು ನಡೆದಿದೆ. ನೆಲಮಂಗಲದಲ್ಲಿ ಮಾಜಿ ಪ್ರೇಯಸಿಗೆ ಕೊಟ್ಟ ಹಣವನ್ನು ವಾಪಸ್ ಕೇಳಿದ್ದನೆಂಬ ಕ್ಷುಲ್ಲಕ ಕಾರಣಕ್ಕೆ ಯುವಕನೋರ್ವನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಕಳೆದ ಮೂರು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ನೆಲಮಂಗಲದ ಜ್ಯೂಸ್ ಸೆಂಟರ್ ನಲ್ಲಿ ಕೆಲಸ ಮಾಡುತ್ತಿದ್ದ ಸುದೀಪ್ ಹಾಗೂ ಆತನ ಸ್ನೇಹಿತ ಚೇತನ್ ಚೂರಿ ಇರಿತದಿಂದ ಮಾರಣಾಂತಿಕವಾಗಿ ಗಾಯಗೊಂಡಿದ್ದಾರೆ. ಸುದೀಪ್ ಎರಡು ವರ್ಷಗಳಿಂದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ.
ಆದರೆ ಕೆಲವು ತಿಂಗಳ ಹಿಂದೆ ಇಬ್ಬರ ನಡುವೆ ಬ್ರೇಕಪ್ ಆಗಿತ್ತು. ಈ ವೇಳೆ ತಾನು ನೀಡಿದ್ದ 2 ಸಾವಿರ ರೂ. ಹಣವನ್ನು ಹಿಂದಿರುಗಿಸುವಂತೆ ಸುದೀಪ್ ತಾಕೀತು ಮಾಡಿದ್ದ. 1 ಸಾವಿರ ರೂ. ಹಣ ಹಿಂದಿರುಗಿಸಿದ್ದ ಯುವತಿ ಮತ್ತೊಂದು ಸಾವಿರ ರೂ. ಹಣ ನೀಡಿರಲಿಲ್ಲ. ಇದಕ್ಕೆ ಸುದೀಪ್ ಫೋನ್ ಮಾಡಿ ಹಣ ಹಿಂದಿರುಗಿಸುವಂತೆ ಕೇಳಿದ್ದ.
ಮೂರು ದಿನದ ಹಿಂದೆ ಕೆಲವು ಯುವಕರು ಜ್ಯೂಸ್ ಅಂಗಡಿಯ ಬಳಿ ಯುವತಿ ಬಳಿ ಹಣ ಕೇಳ್ತೀಯಾ ಎಂದು ಜಗಳ ತೆಗೆದು ಹಲ್ಲೆ ನಡೆಸಿದ್ದರು. ಅಲ್ಲದೇ ತಡೆಯಲು ಬಂದ ಚೇತನ್ ಮೇಲೂ ಸಹ ಚೂರಿಯಿಂದ ಹಲ್ಲೆ ಮಾಡಿ ಪರಾರಿಯಾಗಿದ್ದರು. ಈಗ ಇಬ್ಬರೂ ಸಹ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ನೆಲಮಂಗಲ ಠಾಣೆಯ ಪೊಲೀಸರು ದುಷ್ಕರ್ಮಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.