ಬೆಂಗಳೂರು: ಕೇಂದ್ರ ಸರ್ಕಾರ ಕಟ್ಟುನಿಟ್ಟಾಗಿ ಶಿಷ್ಟಾಚಾರ ಪಾಲನೆ ಮಾಡಬೇಕು ಎಂದು ಸಚಿವ ಮಹದೇವಪ್ಪ ಹೇಳಿದ್ದಾರೆ.ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ರಾಜ್ಯಗಳ ಜೊತೆ ಫೈಟ್ ಮಾಡದೇ ಶಿಷ್ಟಾಚಾರ ಪಾಲನೆ ಮಾಡಬೇಕು ಎಂದರು.
ಕೇಂದ್ರ ಸರ್ಕಾರ ಶಿಷ್ಟಾಚಾರ ಪಾಲನೆ ಮಾಡಬೇಕು. ಸಿಗಂದೂರು ಸೇತುವೆ ಮಾಡಿರುವುದು ಐತಿಹಾಸಿಕ ಕೆಲಸ. ಇದನ್ನು ಸ್ವಾಗತ ಮಾಡಬೇಕು. 2013-18ವರೆಗೆ ನಾನು ಲೋಕೋಪಯೋಗಿ ಇಲಾಖೆಯ ಸಚಿವನಾಗಿದ್ದೆ. ಆಗ ಯಡಿಯೂರಪ್ಪ ನನಗೆ ಸೇತುವೆ ಮಾಡಿಕೊಡಿ ಅಂತ ಕೇಳಿದ್ದರು.
ಕಾಗೋಡು ತಿಮ್ಮಪ್ಪ ಕೂಡ ಮನವಿ ಮಾಡಿದ್ದರು. 2013-18ರ ನಡುವೆ ಕರ್ನಾಟಕ ರೋಡ್ ಡೆವಲಪ್ಮೆಂಟ್ ಕಾರ್ಪೋರೇಷನ್‌ನಿಂದ ಡಿಪಿಆರ್‌ನ್ನು ತಯಾರಿ ಮಾಡಿದ್ದೆವು. ಬಳಿಕ ಗಡ್ಕರಿ ಅವರನ್ನು ಭೇಟಿ ಮಾಡಿ, ನ್ಯಾಷನಲ್ ಹೈವೆ ಅಥವಾ ಸಾಗರಮಾಲ ಯೋಜನೆ ಮಾಡಿ ಕೊಡಿ ಎಂದು ಕೇಳಿದ್ದೆ ಎಂದು ಇತಿಹಾಸ ತಿಳಿಸಿದರು.
ರಾಜ್ಯ ಸರ್ಕಾರವೇ ನಿರ್ಧಾರ ಮಾಡಿ, ಸೇತುವೆ ಆಗಬೇಕು ಎಂದಿದ್ದರು. ನಮ್ಮ ಮನವಿ ಮೇಲೆ ಕೇಂದ್ರ ಕೆಲಸ ಮಾಡಲು ಒಪ್ಪಿಗೆ ನೀಡಿತ್ತು. ಸೇತುವೆ ಆಗಬೇಕು ಅಂತ ನಿರ್ಧಾರ ಮಾಡಿದ್ದೇ ಸಿದ್ದರಾಮಯ್ಯ ಸರ್ಕಾರ. ನಾವು ಒಕ್ಕೂಟ ವ್ಯವಸ್ಥೆಯಲ್ಲಿ ಇದ್ದೇವೆ. ಅಭಿವೃದ್ಧಿ ವಿಷಯದಲ್ಲಿ ಫೈಟ್ ಮಾಡೋ ಅವಶ್ಯಕತೆ ಇಲ್ಲ. ನಾವೇ ಕ್ರೆಡಿಟ್ ತಗೋಬೇಕು ಅಂತ ಮಾಡಬಾರದು ಎಂದು ಕಿಡಿಕಾರಿದರು.