ಸಂಗೀತಕ್ಕೆ ಮಾಂತ್ರಿಕ ಶಕ್ತಿಯಿದೆ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷೇಶ್ವರ: ಸಂಗೀತ ಕಲಿಯುವದೊಂದು ತಪಸ್ಸಿದ್ದಂತೆ. ಪ್ರಾಮಾಣಿಕತೆ, ಶ್ರದ್ಧೆ, ನಿಷ್ಠೆ, ಗುರುಭಕ್ತಿ, ಸತತ ಅಭ್ಯಾಸದ ಮೂಲಕ ಸಂಗೀತವನ್ನು ಕಲಿಯುವವರಿಗೆ ಸಂಗೀತ ಸರಸ್ವತಿ ಒಲಿಯುತ್ತಾಳೆ. ಗುರು ಪರಂಪರೆಯನ್ನು ಉಳಿಸಿಕೊಂಡು ಹೋಗುತ್ತಿರುವ ಸಂಗೀತಕ್ಕೆ ಮಾಂತ್ರಿಕ ಶಕ್ತಿ ಇದೆ ಎಂದು ನಿವೃತ್ತ ಜಿಲ್ಲಾ ನ್ಯಾಯಾಧೀಶ ಹಾಗೂ ಕೊಳಲು ವಾದಕ ಯೋಗೀಶ ಕರಗುದರಿ ಅಭಿಪ್ರಾಯಪಟ್ಟರು.

Advertisement

ಅವರು ಪಟ್ಟಣದ ಎಪಿಎಂಸಿ ಸಭಾ ಭವನದಲ್ಲಿ ಶಾರದಾ ಸಂಗೀತ ಗುರುಕುಲದ 14ನೇ ವಾರ್ಷಿಕೋತ್ಸವ ಮತ್ತು ಗುರುಪೂರ್ಣಿಮಾ ಸಂಗೀತೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ನಾಡಿನ ಹಲವು ಸಂಗೀತ ದಿಗ್ಗಜರು ತಮ್ಮ ಸಂಗೀತದ ಮೂಲಕ ಶ್ರೇಷ್ಠ ಚಿಂತನೆಗಳನ್ನು ಸಾರಿದ್ದಾರೆ. ಶಾಲಾ ಹಂತದಲ್ಲಿಯೇ ಮಕ್ಕಳಿಗೆ ಸಂಗೀತಾಸಕ್ತಿ ಮೂಡಿಸಿದರೆ ಸಂಸ್ಕಾರ, ಮೌಲ್ಯಗಳನ್ನು ರೂಢಿಸಬಹುದು. ಅಶ್ಲೀಲ ಸಾಹಿತ್ಯದ ಇತ್ತೀಚಿನ ಹಾಡುಗಳು ಮತ್ತು ಪಾಶ್ಚಿಮಾತ್ಯ ಸಂಗೀತಗಳಿಗೆ ಮಾರುಹೋಗಿರುವ ಯುವ ಜನತೆಯಿಂದ ನಮ್ಮ ಶ್ರೇಷ್ಠವಾದ ಸಂಗೀತ ಪರಂಪರೆ, ಸಂಸ್ಕೃತಿಯನ್ನು ತಿಳಿಸುವ ಕಾರ್ಯವಾಗಬೇಕು. ಈ ನಿಟ್ಟಿನಲ್ಲಿ ಶಾರದಾ ಸಂಗೀತ ಗುರುಕುಲ ಉತ್ತಮ ಕಾರ್ಯ ಮಾಡುತ್ತಿದೆ ಎಂದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಕೃಷ್ಣ ಕುಲಕರ್ಣಿ ಮತ್ತು ಮುಖ್ಯ ಅತಿಥಿಗಳಾಗಿದ್ದ ಸಾಹಿತಿ ಕೆ.ಎಸ್. ಕೊಡ್ಲಿವಾಡ ಮಾತನಾಡಿ, ಸಂಗೀತ ಪರಂಪರೆಗೆ ತನ್ನದೇ ಆದ ಇತಿಹಾಸವಿದೆ. ಸಂಗೀತ ಕ್ಷೇತ್ರಕ್ಕೆ ಈ ಭಾಗ ತನ್ನದೇ ಆದ ಕೊಡುಗೆ ನೀಡಿದ್ದು, ಸಂಗೀತ ದಿಗ್ಗಜ ಪಂ. ಭೀಮಸೇನ ಜೋಶಿಯವರು ತಮ್ಮ ಬಾಲ್ಯವನ್ನು ಲಕ್ಷ್ಮೇಶ್ವರದಲ್ಲಿ ಕಳೆದಿದ್ದಾರೆ. ಅವರ ತಂದೆ ಪಟ್ಟಣದ ಸರಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿರುವದು ನಮಗೆಲ್ಲ ಹೆಮ್ಮೆಯ ಸಂಗತಿಯಾಗಿದೆ. ನಮ್ಮ ಭಾಗದಲ್ಲಿ ಸಂಗೀತ ಪರಂಪರೆಯನ್ನು ಕೃಷ್ಣಕುಮಾರ ಮತ್ತು ಗಾಯತ್ರಿ ದಂಪತಿಗಳು ಮುಂದುವರೆಸಿ, ನೂರಾರು ವಿದ್ಯಾರ್ಥಿಗಳನ್ನು ಸಿದ್ದಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಭೆಯಲ್ಲಿ ಸಂಸ್ಥೆಯ ಅಧ್ಯಕ್ಷೆ ಶಾರದಾ ಕುಲಕರ್ಣಿ ಉಪಸ್ಥಿತರಿದ್ದರು. ಸತ್ಯನಾರಾಯಣ ತೈಲಂಗ, ಮೃತ್ಯುಂಜಯ ಸಂಕೇಶ್ವರ ಅವರನ್ನು ಸನ್ಮಾನಿಸಲಾಯಿತು. ನಂತರ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಗುರುಕುಲದ ಪುಟ್ಟ ಪುಟ್ಟ ವಿದ್ಯಾರ್ಥಿಗಳು ಸಂಗೀತ ಸೇವೆ, ತಬಲಾ ಸೋಲೋ, ಸಿತಾರವಾದನ ಪ್ರದರ್ಶನ ನೀಡಿ ಗಮನ ಸೆಳೆದರು.

ಸಂಸ್ಥೆಯ ಪ್ರಾಚಾರ್ಯೆ ಗಾಯತ್ರಿ ಕುಲಕರ್ಣಿ ಅವರಿಂದ ಗಾಯನ, ಗದುಗಿನ ಖ್ಯಾತ ತಬಲಾ ವಾದಕ ಪಂ. ವಾಯ್.ಆರ್. ಮೂಲಿಮನಿ, ಗಾಯಕ ಅರ್ಜುನ್ ವಠಾರ, ಚಿದಂಬರ ಜೋಶಿ ಹಾರ್ಮೊನಿಯಂ ವಾದನ, ಯುವ ಕಲಾವಿದ ಪರಶುರಾಮ ಭಜಂತ್ರಿ ಅವರ ಗಾಯನ ಮನಸೂರೆಗೊಂಡಿತು. ಇವರಿಗೆ ಕೃಷ್ಣಕುಮಾರ ಕುಲಕರ್ಣಿ ತಬಲಾ ಸಾಥ್ ನೀಡಿದರು.


Spread the love

LEAVE A REPLY

Please enter your comment!
Please enter your name here