ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಸರ್ಕಾರಿ ಮಾದರಿ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಯಲ್ಲಿ ಮಂಗಳವಾರ ಆರ್‌ಬಿಎಸ್‌ಕೆ ಯೋಜನೆಯಡಿಯಲ್ಲಿ ಶಾಲಾ ಮಕ್ಕಳ ವೈದ್ಯಕೀಯ ತಪಾಸಣೆಯನ್ನು ಹಮ್ಮಿಕೊಳ್ಳಲಾಗಿತ್ತು.
2025-26ನೇ ಸಾಲಿನಲ್ಲಿ ಸರ್ಕಾರದ ಮಹತ್ವದ ಯೋಜನೆಯಾದ ಅನಿಮಿಯಾ ಮುಕ್ತ ಪೌಷ್ಟಿಕ ಕರ್ನಾಟಕ ಕಾರ್ಯಕ್ರಮದಲ್ಲಿ ಮಂಗಳವಾರ ಶಾಲೆಗೆ ಡಾ. ಮಂಜುನಾಥ ಮರಿಗೌಡರ ಅವರ ನೇತೃತ್ವದ ತಂಡ ಆಗಮಿಸಿ ಮಕ್ಕಳ ಆರೋಗ್ಯ ತಪಾಸಣೆ ಮಾಡಿದರು. ಅಲ್ಲದೆ ಮಕ್ಕಳಿಗೆ ಆರೋಗ್ಯವನ್ನು ಚೆನ್ನಾಗಿಟ್ಟುಕೊಳ್ಳಲು ಅನುಸರಿಸಬೇಕಾದ ಪದ್ಧತಿಗಳನ್ನು ವಿವರಿಸಿದರು.
ಈ ವೇಳೆ ಮಾತನಾಡಿದ ಅವರು, ಇತ್ತೀಚೆಗೆ ಮಕ್ಕಳು ರಕ್ತಹೀನತೆಯಿಂದ ಬಳಲುತ್ತಿದ್ದು, ಮಕ್ಕಳಿಗೆ ದಿನನಿತ್ಯ ಆಹಾರದಲ್ಲಿ ಪೌಷ್ಟಿಕಾಂಶಗಳನ್ನು ಬಳಸಲು ಆದ್ಯತೆ ನೀಡಬೇಕಿದೆ. ಪಾಲಕರು ಮಕ್ಕಳಿಗೆ ನೀಡುವ ಆಹಾರದಲ್ಲಿ ಪೌಷ್ಟಿಕಾಂಶಯುಕ್ತ ಅಹಾರವನ್ನು ಬಳಸುವದು ಹೆಚ್ಚು ಸೂಕ್ತವಾಗುತ್ತದೆ ಎಂದು ಸಲಹೆ ನೀಡಿದರು.
ಪ್ರಧಾನ ಗುರುಗಳಾದ ಬಸವರಾಜ ಕುಂಬಾರ ಮಾತನಾಡಿ, ಪಿಎಂ ಪೋಷಣೆ ಯೋಜನೆ ಅಡಿಯಲ್ಲಿ ಶಾಲಾ ಮಕ್ಕಳಿಗೆ ವಾರದ ಐದು ದಿನಗಳಲ್ಲಿ ರಾಗಿ ಮಾಲ್ಟ್, ಹಾಲು, ಮೊಟ್ಟೆ, ಬಾಳೆಹಣ್ಣು, ಮಧ್ಯಾಹ್ನ ಬಿಸಿ ಊಟ ವಿತರಿಸುತ್ತಿದು, ಊಟದಲ್ಲಿ ಗುಣಮಟ್ಟದ ತರಕಾರಿಗಳನ್ನು ಬಳಸಲಾಗುತ್ತಿದೆ. ಇದರಿಂದ ದೇಹಕ್ಕೆ ಪೌಷ್ಟಿಕಾಂಶಗಳು ದೊರೆಯುತ್ತವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ರಕ್ತ ಹೀನತೆಯಿಂದ ಬಳಲುತ್ತಿರುವ ಮಕ್ಕಳ ರಕ್ತ ತಪಾಸಣೆ ಮಾಡಿ ಅವರಿಗೆ ಔಷಧ ವಿತರಿಸಲಾಯಿತು. ಶಾಲಾ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.