ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ಗೆ ಹೈಕೋರ್ಟ್ ಜಾಮೀನು ನೀಡಿದೆ. ಸದ್ಯ ದರ್ಶನ್ ಡೆವಿಲ್ ಸಿನಿಮಾದ ಶೂಟಿಂಗ್ ಗಾಗಿ ಥಾಯ್ಲೆಂಡ್ ಗೆ ತೆರಳಿದ್ದಾರೆ. ಈ ಮಧ್ಯೆ ಇಂದು ದರ್ಶನ್ ಗೆ ಹೈಕೋರ್ಟ್ ನೀಡಿರುವ ಜಾಮೀನನ್ನು ಪ್ರಶ್ನಿಸಿ ರಾಜ್ಯ ಪೊಲೀಸ್ ಇಲಾಖೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಅದರ ವಿಚಾರಣೆ ಇಂದು ನಡೆಯಿತು.
ಜಸ್ಟೀಸ್ ಜೆ.ಬಿ.ಪರ್ದಿವಾಲಾ ಅವರ ಪೀಠದಲ್ಲಿ ಈ ಅರ್ಜಿಯ ವಿಚಾರಣೆ ನಡೆಯಿತು. ವಾದಿ ಮತ್ತು ಪ್ರತಿವಾದಿಗಳಿಬ್ಬರ ಪರ ವಕೀಲರು ಸುಪ್ರೀಂ ಕೋರ್ಟ್ನಲ್ಲಿ ಉಪಸ್ಥಿತರಿದ್ದು ವಾದ ಮಂಡನೆ ನಡೆಸಿದರು. ಈ ವೇಳೆ ದರ್ಶನ್ ಗೆ ಜಾಮೀನು ನೀಡುವಾಗ ಹೈಕೋರ್ಟ್ ತನ್ನ ವಿವೇಚನೆಯನ್ನು ಸೂಕ್ತವಾಗಿ ಬಳಸಿಲ್ಲ ಎಂದು ನ್ಯಾ. ಪರ್ದಿವಾಲಾ ಆಕ್ಷೇಪಿಸಿದ್ದರು.
ನ್ಯಾ. ಪರ್ದಿವಾಲಾ ಆಕ್ಷೇಪಣೆಗೆ ಈ ಬಗ್ಗೆ ಏನು ಹೇಳಬಯಸುತ್ತೀರಿ ಎಂದು ದರ್ಶನ್ ಪರ ಹಿರಿಯ ವಕೀಲ ಕಪಿಲ್ ಸಿಬಲ್‌ಗೆ ಸುಪ್ರೀಂ ಕೋರ್ಟ್ ಪ್ರಶ್ನಿಸಿತು. ಹೈಕೋರ್ಟ್ ಆದೇಶವನ್ನು ಹೇಗೆ ನೀಡಿದೆ ಎನ್ನುವುದನ್ನು ನೀವು ಗಮನಿಸಿರಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈ ಮೂಲಕ ಹೈಕೋರ್ಟ್, ನಟ ದರ್ಶನ್ ಹಾಗೂ ಉಳಿದವರಿಗೆ ಜಾಮೀನು ನೀಡಿರುವುದಕ್ಕೆ ಸುಪ್ರೀಂ ಕೋರ್ಟ್ ಅತೃಪ್ತಿ, ಅಸಮಾಧಾನ ವ್ಯಕ್ತಪಡಿಸಿದೆ.
ಜುಲೈ 22ರಂದು ವಿಸ್ತೃತವಾಗಿ ಪ್ರಕರಣವನ್ನು ಆಲಿಸುವುದಾಗಿ ಸುಪ್ರೀಂ ಕೋರ್ಟ್ ನ್ಯಾಯಪೀಠ ತಿಳಿಸಿದೆ. ಎರಡೂ ಕಡೆಯ ವಕೀಲರಿಗೆ ವಾದಗಳನ್ನು ಸಿದ್ಧಪಡಿಸಿಕೊಳ್ಳುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ.