ಬೆಂಗಳೂರು:– ಬಿಡದಿ ಬಳಿ ಕೇತಗಾನಹಳ್ಳಿಯಲ್ಲಿ ಜಮೀನು ಒತ್ತುವರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರಿಗೆ ಸುಪ್ರೀಂಕೋರ್ಟ್ ಬಿಗ್ ರಿಲೀಫ್ ನೀಡಿದೆ.
ಕರ್ನಾಟಕ ಹೈಕೋರ್ಟ್ನಲ್ಲಿ ದಾಖಲಿಸಿರುವ ನ್ಯಾಯಾಂಗ ನಿಂದನೆ ವಿಚಾರಣೆಗೆ ಸುಪ್ರೀಂಕೋರ್ಟ್ ತಾತ್ಕಾಲಿಕವಾಗಿ ತಡೆ ನೀಡಿದೆ. ಹೈಕೋರ್ಟ್ ಆದೇಶ ಪ್ರಶ್ನಿಸಿ ಕುಮಾರಸ್ವಾಮಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಂಕಜ್ ಮಿಥಲ್ ಹಾಗೂ ನ್ಯಾಯಾಮೂರ್ತಿ.ಪ್ರಸನ್ನ ಬಿ. ವರಾಳೆ ಅವರ ದ್ವಿಸದಸ್ಯ ಪೀಠ, ಮುಂದಿನ ಆದೇಶದವರೆಗೂ ಕುಮಾರಸ್ವಾಮಿ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆಗೆ ತಡೆ ನೀಡಿ ಆದೇಶ ಹೊರಡಿಸಿದೆ.
ಸುಪ್ರೀಂಕೋರ್ಟ್ನಲ್ಲಿ ನ್ಯಾಯಾಂಗ ನಿಂದನೆ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ವಿಚಾರಣೆಗೆ ಬಾಕಿ ಇರುವುದರಿಂದ ತಮ್ಮ ವಿರುದ್ಧದ ಕಾನೂನು ಪ್ರಕ್ರಿಯೆಗೆ ತಡೆ ನೀಡುವಂತೆ ಕುಮಾರಸ್ವಾಮಿ ಹೈಕೋರ್ಟ್ಗೆ ಮನವಿ ಮಾಡಿದ್ದರು. ಕುಮಾರಸ್ವಾಮಿ ಅವರ ಮನವಿ ಪರಿಗಣಿಸಿದ ನ್ಯಾಯಾಲಯ, ಮಾರ್ಚ್ 27 ರವರೆಗೂ ಅರ್ಜಿದಾರರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಆದೇಶಿಸಿ ವಿಚಾರಣೆಯನ್ನು ಮುಂದೂಡಿತ್ತು. ಇದೀಗ ಸುಪ್ರೀಂಕೋರ್ಟ್, ಕುಮಾರಸ್ವಾಮಿ ವಿರುದ್ಧ ನ್ಯಾಯಾಂಗ ನಿಂದನೆ ವಿಚಾರಣೆಗೆ ತಡೆ ನೀಡಿ ಆದೇಶಿಸಿದೆ.