ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಕಲಿತ ಶಾಲೆಯನ್ನು, ಕಲಿಸಿದ ಗುರುಗಳನ್ನು ಎಂದಿಗೂ ಮರೆಯಬೇಡಿ. ನೀವು ಸಂಸ್ಕಾರವಂತರಾಗಿ ಬಾಳಿದರೆ ಅದೇ ನೀವು ಈ ಸಮಾಜಕ್ಕೆ ನೀಡುವ ದೊಡ್ಡ ಕೊಡುಗೆ ಎಂದು ಶ್ರೀ ಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆಯ ಚೇರಮನ್ ಡಾ. ಜಿ.ಕೆ. ಕಾಳೆ ಹೇಳಿದರು.
ಶ್ರೀ ಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆಯ 2025-26ನೇ ಸಾಲಿನ ವಿವಿಧ ಸಾಂಘಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನೆಯನ್ನು ನೆರವೇರಿಸಿ, ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹಲವು ಕನಸುಗಳನ್ನಿಟ್ಟುಕೊಂಡು ಲಿಂ. ಡಾ. ಅಭಿನವ ಅನ್ನದಾನ ಮಹಾಸ್ವಾಮಿಗಳವರು ಈ ಶಾಲೆಯನ್ನು ಪ್ರಾರಂಭಿಸಿದ್ದಾರೆ. ಈ ಶಾಲೆಯ ಮುಖ್ಯ ಶಿಕ್ಷಕಿ ಭಾರತಿ ಶಿರ್ಸಿ ಮತ್ತಿತರರು ತಮ್ಮ ಸಮರ್ಪಣಾ ಮನೋಭಾವನೆಯಿಂದ ದುಡಿದು ಶಾಲೆಗೆ ಒಳ್ಳೆಯ ಹೆಸರನ್ನು ತಂದುಕೊಟ್ಟಿದ್ದಾರೆ. ಇದೆಲ್ಲವನ್ನೂ ಮನಗಂಡು ಈ ಶಾಲೆಯ ಕೀರ್ತಿಯನ್ನು ಹೆಚ್ಚಿಸುವತ್ತ ಗಮನ ನೀಡಬೇಕೆಂದು ಡಾ. ಕಾಳೆ ಹೇಳಿದರು.
ನಿವೃತ್ತ ಮುಖ್ಯ ಶಿಕ್ಷಕ ಅರುಣ ಕುಲಕರ್ಣಿ ಮಾತನಾಡಿ, ಜೀವನದಲ್ಲಿ ಯಾವುದೇ ಯಶಸ್ಸು ಸುಲಭವಾಗಿ ಒಲಿಯುವಂತಹುದಲ್ಲ. ಅದಕ್ಕೆ ಸತತ ಸಾಧನೆ ಬೇಕು. ಈ ಸಾಧನೆಗೆ ಪರಿಶ್ರಮ, ಶ್ರದ್ಧೆ, ಪ್ರಾಮಾಣಿಕ ಪ್ರಯತ್ನ ಎಲ್ಲವೂ ಬೇಕಾಗುತ್ತದೆ. ತಾಳ್ಮೆಯೂ ಸಹ ಮುಖ್ಯ. ಒಮ್ಮೆಲೇ ಸಿಕ್ಕ ಯಶಸ್ಸು ಎಂದಿಗೂ ಶಾಶ್ವತವಲ್ಲ. ಹಂತಹಂತವಾಗಿ ಪಡೆದ ಯಶಸ್ಸು ನಿಮ್ಮ ಮನಸ್ಸಿಗೆ ನೆಮ್ಮದಿಯನ್ನು ನೀಡುವುದರ ಜೊತೆಗೆ ಶಾಶ್ವತವಾಗಿ ನಿಮ್ಮಲ್ಲಿ ಉಳಿಯುತ್ತದೆ ಎಂದರು.
ಸಭೆಯನ್ನುದ್ದೇಶಿಸಿ ಸಂಸ್ಥೆಯ ಆಡಳಿತಾಧಿಕಾರಿ ಎನ್.ಆರ್. ಗೌಡರ ಮಾತನಾಡಿದರು. ವೇದಿಕೆಯ ಮೇಲೆ ಉಚಿತ ಪ್ರಸಾದ ನಿಲಯದ ಚೇರಮನ್ ಮಲ್ಲಿಕಾರ್ಜುನಪ್ಪ ಮೆಣಸಗಿ, ಮುಖ್ಯೋಪಾಧ್ಯಾಯೆ ಬಿ.ಜಿ. ಶಿರ್ಸಿ ಉಪಸ್ಥಿತರಿದ್ದರು. ಶಿಕ್ಷಕಿ ಎಂ.ಎಂ ಶಿಳ್ಳಿನ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಿಕ್ಷಕ ಕೋಳಿವಾಡ ನಿರೂಪಿಸಿದರು. ಒಂಟೇಲಿ ವಂದಿಸಿದರು.



