ವಿಜಯಸಾಕ್ಷಿ ಸುದ್ದ, ಲಕ್ಷ್ಮೇಶ್ವರ: ಕೃಷಿ ಜಮೀನಿನ ಮಾಲೀಕರು ಮರಣ ಹೊಂದಿದ ನಂತರ ವಾರಸುದಾರರ ಖಾತೆ ಬದಲಾವಣೆ ಮಾಡಲು ಪೌತಿ-ವಾರಸಾ ಖಾತೆ ಆಂದೋಲನವನ್ನು ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದು, ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಹೇಳಿದರು.
ಅವರು ಶುಕ್ರವಾರ ಸಮೀಪದ ಗೊಜನೂರ ಗ್ರಾಮದ ಸಮುದಾಯ ಭವನದಲ್ಲಿ ನಡೆದ ಇ-ಪೌತಿ ಖಾತಾ ಆಂದೋಲನ ಉದ್ಘಾಟಿಸಿ ಮಾತನಾಡುತ್ತಿದ್ದರು.
ರಾಜ್ಯ ಸರ್ಕಾರ ಪೌತಿ ಖಾತಾ ಆಂದೋಲನ ಆರಂಭಿಸಿದ್ದು, ಸಾರ್ವಜನಿಕರು ತಮ್ಮ ಆಸ್ತಿಗಳ ಇ -ಖಾತೆ ಮಾಡಿಸಿಕೊಳ್ಳಬೇಕು. ಮಾಲೀಕತ್ವವು ಮೃತರ ವಾರಸುದಾರರ ಹೆಸರಿಗೆ ಬದಲಾವಣೆಯಾಗದಿದ್ದಲ್ಲಿ, ಉಂಟಾಗುವ ಸಮಸ್ಯೆಗಳನ್ನು ಪರಿಹರಿಸಲು ಪೌತಿ-ವಾರಸಾ ಸ್ವರೂಪದ ಮ್ಯುಟೇಷನ್ ಪ್ರಕ್ರಿಯೆಯನ್ನು ಸರಳೀಕೃತಗೊಳಿಸಿ ಪೌತಿ-ವಾರಸಾ ಖಾತೆ ಆಂದೋಲನ ನಡೆಸಲಾಗುತ್ತಿದೆ. ಅಂತಹ ವಾರಸುದಾರರಿಗೆ ಸರ್ಕಾರದಿಂದ ಸಿಗಬಹುದಾದ ಹಲವಾರು ಪ್ರಯೋಜನಗಳಿಂದ ಹಾಗೂ ಜಮೀನು ಅಭಿವೃದ್ಧಿಗೆ ಸಂಬಂಧಿಸಿದ ಸಾಲ ಸೌಲಭ್ಯ, ಬೆಳೆ ಹಾನಿ ಪರಿಹಾರ, ಬೆಳೆ ವಿಮೆಯಂತಹ ಅನೇಕ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಆಡಳಿತ ಅಧಿಕಾರಿಗಳು ಮೃತರ ವಾರಸುದಾರರ ಮನೆ ಬಾಗಿಲಿಗೆ ಆಗಮಿಸಿ, ಇ-ಪೌತಿ-ವಾರಸಾ ಖಾತೆಯನ್ನು ದಾಖಲಿಸಿಕೊಳ್ಳಲು ಕ್ರಮ ವಹಿಸಲಾಗುತ್ತಿದೆ ಎಂದು ಹೇಳಿದರು.
ವಾರಸುದಾರರಿಲ್ಲದೆ ಮೃತಪಟ್ಟವರ ಆಸ್ತಿಗಳು ಸರ್ಕಾರದ ಪಾಲಾಗುತ್ತವೆ. ಮೃತಪಟ್ಟವರ ಸಂಬಂಧಿಕರು ಸರಿಯಾದ ದಾಖಲೆಗಳನ್ನು ತಂದುಕೊಟ್ಟಲ್ಲಿ ಗ್ರಾಮಲೆಕ್ಕಿಗರು ಪರೀಕ್ಷೆ ನಡೆಸಿ ಸೂಕ್ತವೆಂದು ತಿಳಿದು ಬಂದಲ್ಲಿ ಅವರಿಗೆ ಆಸ್ತಿಯಲ್ಲಿ ಹಕ್ಕು ನೀಡುವ ಕಾರ್ಯ ಮಾಡಲಾಗುತ್ತಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಾರ್ವಜನಿಕರು, ರೈತರು, ಮಹಿಳೆಯರು ವಿವಿಧ ವಿಷಯಗಳ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ತಹಸೀಲ್ದಾರ ಧನಂಜಯ ಎಂ, ಕಂದಾಯ ನಿರೀಕ್ಷಕ ಎಂ.ಎ. ನಧಾಪ್, ಗ್ರಾ.ಪಂ ಅಧ್ಯಕ್ಷ ಮಂಜುನಾಥ ಚಲವಾದಿ, ಉಪಾಧ್ಯಕ್ಷ ಮಹಾಂತೇಶಗೌಡ ಪಾಟೀಲ, ಶಿವನಗೌಡ ಪಾಟೀಲ, ಸಿ.ಪಿ. ಮಾಡಳ್ಳಿ, ಶಂಬುಲಿಂಗಪ್ಪ ಸೊರಟೂರ, ಮುತ್ತಣ್ಣ ಶೆಟ್ರು ವಡಕಣ್ಣವರ, ಚನ್ನಪ್ಪ ಷಣ್ಮುಖಿ, ಗ್ರಾಮ ಲೆಕ್ಕಾಧಿಕಾರಿ ನಾಗರಾಜ ಕನೋಜಿ ಹಾಗೂ ಗ್ರಾ.ಪಂ ಸದಸ್ಯರು ಇದ್ದರು.
ಗೊಜನೂರ ಗ್ರಾಮದಲ್ಲಿ ಸುಮಾರು 90ಕ್ಕೂ ಹೆಚ್ಚು ಪೌತಿ ಖಾತೆ ಮಾಡಿಸಿಕೊಳ್ಳುವ ಆಸ್ತಿಗಳು ಇದ್ದು, ಅವರ ಸಂಬಂಧಿಕರು ಸರಿಯಾದ ದಾಖಲೆಗಳನ್ನು ತಂದುಕೊಟ್ಟಲ್ಲಿ ಆ ಖಾತೆಗಳನ್ನು ವಾರಸುದಾರರಿಗೆ ಮಾಡಿಕೊಡಲಾಗುತ್ತದೆ. ಸುಮಾರು 24ಕ್ಕೂ ಹೆಚ್ಚು ಪ್ರಕರಣಗಳು ಮೂರು ತಲೆಮಾರುಗಳಿಂದ ಖಾತಾ ಬದಲಾವಣೆ ಮಾಡಿಕೊಳ್ಳದೆ ಹಾಗೇ ಇದ್ದು, ಅವುಗಳಿಗೆ ಸರಿಯಾದ ದಾಖಲೆಗಳನ್ನು ನೀಡಿ ಸಮಸ್ಯೆ ಪರಿಹಾರ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.



